ಪುಣೆ ಸ್ಫೋಟ: ಹಿಮಾಯತ್ಗೆ ಗಲ್ಲು ಶಿಕ್ಷೆ
2010ರ ಜರ್ಮನ್ ಬೇಕರಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಹಿಮಾಯತ್ ಬೇಗ್ಗೆ ಪುಣೆಯ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಪುಣೆ: 2010ರ ಜರ್ಮನ್ ಬೇಕರಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಹಿಮಾಯತ್ ಬೇಗ್ಗೆ ಪುಣೆಯ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
2010ರ ಫೆಬ್ರವರಿಯಲ್ಲಿ ಪುಣೆಯ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ಬಂಧಿತ ಉಗ್ರ ಹಿಮಾಯತ್ ಬೇಗ್ನ ಪಾತ್ರ ಸಾಬೀತಾಗಿದ್ದು, ಆತನಿಗೆ ಪುಣೆಯ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆಯನ್ನು ನೀಡಿದೆ. ಪ್ರಕರಣದಲ್ಲಿ ಹಿಮಾಯತ್ ಬೇಗ್, ಭಯೋತ್ಪಾದನೆ ಕೃತ್ಯ ಮತ್ತು ದೇಶ ದ್ರೋಹ ಕೃತ್ಯದಲ್ಲಿ ಭಾಗಿಯಾಗಿರುವ ವಿಚಾರ ಸ್ಪಷ್ಟವಾಗಿದ್ದು, ಸ್ವತಃ ಆತನೇ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದಾನೆ ಎಂದು ತನಿಖಾಧಿಕಾರಿಗಳು ಈ ಹಿಂದೆ ತಿಳಿಸಿದ್ದರು.
ಪ್ರಕರಣದ ಬಗ್ಗೆ ಕಳೆದ ಸೋಮವಾರ ವಿಚಾರಣೆ ನಡೆಸಿದ್ದ ಪುಣೆ ನ್ಯಾಯಾಲಯ, ಹಿಮಾಯತ್ ಬೇಗ್ ಅಪರಾಧಿ ಎಂದು ತೀರ್ಪು ನೀಡಿತ್ತು. ಅಲ್ಲದೆ ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 18ರಂದು ಪ್ರಕಟಿಸುವುದಾಗಿ ತಿಳಿಸಿತ್ತು. ಅದರಂತೆ ಇಂದು ವಿಚಾರಣೆ ನಡೆಸಿದ ಪುಣೆಯ ವಿಶೇಷ ಸೆಷನ್ಸ್ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಂ.ಪಿ ದೋತೆ ಅವರು, ಸ್ಫೋಟದಲ್ಲಿ ಹಿಮಾಯತ್ ಬೇಗ್ನ ಪಾತ್ರವಿರುವುದು ಕಂಡುಬಂದಿದ್ದು, ತನಿಖಾ ವರದಿಗಳ ಅನ್ವಯ ಆತನನ್ನು ಅಪರಾಧಿ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿದೆ. ಅತನಿಗೆ ಗಲ್ಲು ಶಿಕ್ಷೆಗಿಂತ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಿದರೆ ನ್ಯಾಯಾಲಯದ ಬಗ್ಗೆ ಜನರಲ್ಲಿ ತಪ್ಪು ಭಾವನೆ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2010ರ ಫೆಬ್ರವರಿ 13ರಂದು ಪುಣೆಯ ಅತ್ಯಂತ ಜನನಿಬಿಡ ಪ್ರದೇಶ ಮತ್ತು ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಕೋರ್ಗಾಂವ್ ಪಾರ್ಕ್ ಬಳಿ ಇರುವ ಜರ್ಮನ್ ಬೇಕರಿ ಬಳಿ ಪ್ರಬಲ ಬಾಂಬ್ ಸ್ಫೋಟವಾಗಿತ್ತು. ಘಟನೆಯಲ್ಲಿ 17 ಮಂದಿ ದಾರುಣವಾಗಿ ಸಾವನ್ನಪ್ಪಿ, ಸುಮಾರು 64 ಜನರು ಗಂಭೀರವಾಗಿ ಗಾಯಗೊಂಡಿದ್ದರು.
ಮೃತಪಟ್ಟವರಲ್ಲಿ ಅನೇಕ ವಿದೇಶಿಯರು ಮತ್ತು ಹಲವು ಭಾರತೀಯರು ಸಾವನ್ನಪ್ಪಿದ್ದರು. ಪ್ರಕರಣವನ್ನು ತನಿಖೆಗೆ ತೆಗೆದುಕೊಂಡ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ, ಬಾಂಬ್ ಸ್ಫೋಟಗೊಂಡ 6 ತಿಂಗಳ ನಂತರ ಅಂದರೆ 2010 ಸೆಪ್ಟೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರದ ಲಾತುರ್ ಜಿಲ್ಲೆಯ ಉದ್ಗಿರ್ನಿಂದ ಇಂಡಿಯನ್ ಮುಜಾಹಿದ್ದೀನ್ ಉಗ್ರ ಹಿಮಾಯತ್ ಬೇಗ್ನನ್ನು ಬಂಧಿಸಿತ್ತು.
ಭಾರತೀಯ ದಂಡ ಸಂಹಿತೆ ಸೆಕ್ಷನ್ 302, 307,102ಬಿ, 153ಎ, 325, 326, ಕೊಲೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ, ಕುತಂತ್ರ ನಡೆಸಿದ ಆರೋಪದ ಅಡಿಯಲ್ಲಿ ಹಿಮಾಯತ್ ಬೇಗ್ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಮಹಾರಾಷ್ಟ್ರದಲ್ಲಿ ಹೈ ಅಲರ್ಟ್
ಪುಣೆಯ ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ಅಪರಾಧಿ ಮಿರ್ಜಾ ಹಿಮಾಯತ್ ಬೇಗ್ಗೆ ಪುಣೆಯ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆವಿಧಿಸುತ್ತಿದ್ದಂತೆಯೇ ಇತ್ತ ಕೇಂದ್ರ ಗೃಹ ಇಲಾಖೆ ಮಹಾರಾಷ್ಟ್ರ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದೆ. ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ತಡೆಯಲು ಈ ನಿರ್ಧಾರಕ್ಕೆ ಬರಲಾಗಿದ್ದು, ಅಂತೆಯೇ ಮಹಾರಾಷ್ಟ್ರ ಪೊಲೀಸರಿಗೆ ಈ ಬಗ್ಗೆ ಸೂಚನೆ ರವಾನಿಸಲಾಗಿದೆ ಎಂದು ಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.