ಬಾಂಬ್ ದಾಳಿ ತನಿಖೆಗೆ 4 ವಿಶೇಷ ತಂಡ: ಪಚಾವೋ
ಬಿಜೆಪಿ ಕಚೇರಿ ಬಳಿ ನಡೆದ ಬಾಂಬ್ ದಾಳಿ ಪ್ರಕರಣದ ತನಿಖೆಗೆ ನಾಲ್ಕು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲಾಲ್ ರುಖುಮ ಪಚಾವೋ ತಿಳಿಸಿದ್ದಾರೆ.
ಬೆಂಗಳೂರು: ಮಲ್ಲೇಶ್ವರಂನ ಬಿಜೆಪಿ ಕಚೇರಿ ಬಳಿ ಬುಧವಾರ ನಡೆದ ಬಾಂಬ್ ದಾಳಿ ಪ್ರಕರಣದ ತನಿಖೆಗಾಗಿ ನಾಲ್ಕು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲಾಲ್ ರುಖುಮ ಪಚಾವೋ ತಿಳಿಸಿದ್ದಾರೆ.
ಬಾಂಬ್ ಸ್ಫೋಟ ಪ್ರಕರಣ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಚಾವೋ, ಪ್ರಕರಣದ ತನಿಖೆಗಾಗಿ 4 ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಈ ನಾಲ್ಕು ತಂಡಗಳಿಗೆ ಕೇಂದ್ರೀಯ ತನಿಖಾ ದಳ(ಎನ್‌ಐಎ) ಮತ್ತು ರಾಷ್ಟ್ರೀಯ ಭದ್ರತಾ ಪಡೆಗಳು ನೆರವು ನೀಡುತ್ತವೆ ಎಂದು ತಿಳಿಸಿದರು.
'ಪ್ರಕರಣವನ್ನು ರಾಜ್ಯ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಬಾಂಬ್ ದಾಳಿ ನಡೆಸಿದವರ ಕುರಿತು ನೇರ ಅಥವಾ ಪರೋಕ್ಷವಾಗಿ ಮಾಹಿತಿ ನೀಡಿದವರಿಗೆ 5 ಲಕ್ಷ ನಗದು ಬಹುಮಾನವನ್ನು ನೀಡಲಾಗುತ್ತದೆ. ಘಟನೆಯಲ್ಲಿ ಉಗ್ರರ ಕೈವಾಡವಿರುವ ಸಾಧ್ಯತೆ ಇದ್ದು, ತನಿಖೆಯನ್ನು ಮುಂದುವರೆಸಲಾಗಿದೆ. ಅಪರಾಧ ದಳದ ಜಂಟಿ ಪೊಲೀಸ್ ಆಯುಕ್ತರಾದ ಪ್ರಣಬ್ ಮೊಹಾಂತಿ ಮತ್ತು ರಾಘವೇಂದ್ರ ಔರಾದ್‌ಕರ್ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ನೇಮಿಸಿರುವ 4 ವಿಶೇಷ ತಂಡಗಳು ಕಾರ್ಯ ನಿರ್ವಹಿಸಲಿವೆ'.
'ಘಟನಾ ಸ್ಥಳದಿಂದ ಹಲವು ಶಂಕಾಸ್ಪದ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ, ಎನ್‌ಐಎ, ಎನ್‌ಎಸ್‌ಜಿ ಮತ್ತು ರಾಷ್ಟ್ರೀಯ ಭದ್ರತಾ ಪಡೆಗಳು ಸಂಗ್ರಹಿಸಿದ್ದು, ಅವುಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸುತ್ತಿದ್ದಾರೆ' ಎಂದು ಪಚಾವೋ ತಿಳಿಸಿದರು.
ಗಾಯಾಳುಗಳಿಗೆ ಸರ್ಕಾರದ ನೆರವು ಘೋಷಣೆ
ನಿನ್ನೆ ಮಲ್ಲೇಶ್ವರಂನ ಬಿಜೆಪಿ ಕಚೇರಿ ಬಳಿ ನಡೆದ ಬಾಂಬ್ ದಾಳಿಯಲ್ಲಿ ಗಾಯಗೊಂಡಿದ್ದ 11 ಪೊಲೀಸರು ಸೇರಿದಂತೆ ಒಟ್ಟು 16 ಮಂದಿಗೆ ರಾಜ್ಯ ಸರ್ಕಾರ ನೆರವು ಘೋಷಿಸಿದೆ. ಚಿಕಿತ್ಸಾ ವೆಚ್ಚ ಸೇರಿದಂತೆ ಗಂಭೀರವಾಗಿ ಗಾಯಗೊಂಡವರಿಗೆ ತಲಾ ಒಂದು ಲಕ್ಷ ಮತ್ತು ಸಣ್ಣ ಪುಟ್ಟ ಗಾಯಗಳಾದವರಿಗೆ ತಲಾ 5000 ರುಪಾಯಿಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ.