ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಾಂಬ್ ಸ್ಫೋಟದ ಕುರಿತು ಇನ್ನೂ ಸುಳಿವು ಸಿಕ್ಕಿಲ್ಲ: ಶಿಂಧೆ

ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ಕುರಿತು ಇನ್ನೂ ಯಾವುದೇ ರೀತಿಯ ಸುಳಿವುಗಳು ದೊರೆತಿಲ್ಲ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.

Srinivasa Murthy VN
Updated On : 18 Apr 2013, 5:09 am

ನವದೆಹಲಿ: ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ಕುರಿತು ಇನ್ನೂ ಯಾವುದೇ ರೀತಿಯ ಸುಳಿವುಗಳು ದೊರೆತಿಲ್ಲ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.

ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣ ಕುರಿತು ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಬೆಂಗಳೂರು ಸ್ಫೋಟಕ್ಕೆ ಸಂಬಂಧಿಸಿದಂತೆ ಇದುವರೆವಿಗೂ ಯಾವುದೇ ರೀತಿಯ ಸುಳಿವು ದೊರೆತಿಲ್ಲ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಬಾಂಬ್ ದಾಳಿ ನಡೆದ ದಿನದಂದೇ ಮತ್ತೆ ಸ್ಫೋಟ ಸಂಭವಿಸಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಕೇಂದ್ರೀಯ ತನಿಖಾದಳಗಳು ತನಿಖೆಯನ್ನು ಚುರುಕುಗೊಳಿಸಿವೆ. ಸ್ಫೋಟಕ್ಕೆ ಬಳಸಲಾದ ಬೈಕ್‌ನ ಮಾಲೀಕನನ್ನು ತಮಿಳುನಾಡು ಪೊಲೀಸರ ಸಹಾಯದಿಂದ ಪತ್ತೆ ಮಾಡಲಾಗಿದ್ದು, ಮಾಲೀಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಪ್ರಕರಣ ಸಂಬಂಧ ಕರ್ನಾಟಕ ಸರ್ಕಾರದಿಂದ ವರದಿ ಕೇಳಲಾಗಿದ್ದು, ವರದಿ ಬಂದ ನಂತರ ವರದಿಯನ್ನು ಪರಿಶೀಲಿಸಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ವಹಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಸ್ಫೋಟದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಹೊತ್ತಿಕೊಂಡಿಲ್ಲ ಎಂದು ಶಿಂಧೆ ಹೇಳಿದರು.

ಬಾಂಬ್ ಸ್ಫೋಟದಿಂದಾಗಿ ಕರ್ನಾಟಕ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದೇ..? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿಂಧೆ, ಸ್ಫೋಟದಿಂದಾಗಿ  ಕರ್ನಾಟಕ ವಿಧಾನಸಭಾ ಚುನಾವಣೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ನಿಗದಿತ ವೇಳಾಪಟ್ಟಿಯಂತೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ರಾಮನವಮಿ ಪ್ರಯಕ್ತ ಯಾವುದೇ ಮುನ್ಸೂಚನೆ ಇಲ್ಲ
ಮುಂಬರುವ ರಾಮನವಮಿಯಂದು ಯಾವುದಾದರು ದುಷ್ಕೃತ್ಯ ನಡೆಯುವ ಸಾಧ್ಯತೆಯನ್ನು ಸಚಿವ ಶಿಂಧೆ ತಳ್ಳಿಹಾಕಿದರು. 'ರಾಮನವಮಿಯಂದು ಉಗ್ರರು ದಾಳಿ ನಡೆಸುವ ಕುರಿತು ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಯಾವುದೇ ವಿಶೇಷ ಮುನ್ಸೂಚನೆ ರವಾನಿಸಿಲ್ಲ. ಆದರೆ ಎಲ್ಲ ರಾಜ್ಯಗಳಲ್ಲಿಯೂ ಹಿಂದೆ ತಿಳಿಸಿದಂತೆ ಸಾಮಾನ್ಯ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ ಎಂದು ಶಿಂಧೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement