ಅತ್ಯಂತ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಮಲಾಲ
ಪಾಕಿಸ್ತಾನದ ಬಾಲ ಹೋರಾಟಗಾರ್ತಿ ಮಲಾಲ ಯೂಸುಫ್‌ಝೈ, ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನಗಳಿಸಿದ್ದಾಳೆ.
ನ್ಯೂಯಾರ್ಕ್: ಪಾಕಿಸ್ತಾನದ ಬಾಲ ಹೋರಾಟಗಾರ್ತಿ ಮಲಾಲ ಯೂಸುಫ್‌ಝೈ, ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನಗಳಿಸಿದ್ದಾಳೆ.
ಇತ್ತೀಚೆಗೆ ಟೈಮ್ಸ್ ಮ್ಯಾಗಜಿನ್ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಹೊರಬಿದ್ದಿದೆ. ಪಾಕಿಸ್ತಾನದಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ಹೋರಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾದ ಮಲಾಲ, ಈಗ ವಿಶ್ವದ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನಗಳಿಸಿದ್ದಾಳೆ. ಕಲೆ, ವಾಣಿಜ್ಯ, ರಾಜಕೀಯದಂತಹ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನಗಳಿಸಿದ ಅತ್ಯಂತ ಕಿರು ವಯಸ್ಸಿನ ಸಾಧಕಿ ಎಂಬ ಖ್ಯಾತಿಗೆ 15 ವರ್ಷದ ಮಲಾಲ ಯೂಸುಫ್‌ಝೈ ಭಾಜನಳಾಗಿದ್ದಾಳೆ.
ಟೈಮ್ಸ್ ಮ್ಯಾಗಜಿನ್ ಬಿಡುಗಡೆ ಮಾಡಿರುವ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಸತತ 8ನೇ ಬಾರಿ ಸ್ಥಾನಗಳಿಸಿದ್ದಾರೆ. ಅಂತೆಯೇ ಅವರ ಪತ್ನಿ ಮಿಶೆಲ್ ಒಬಾಮ, ಹಾಲಿವುಡ್ ಚಿತ್ರ ನಿರ್ದೇಶಕ ಸ್ಟೀವೆನ್ ಸ್ಪೀಲ್‌ಬರ್ಗ್, ಆಸ್ಕರ್ ಪ್ರಶಸ್ತಿ ವಿಜೇತ ನಟ ಡೇನಿಯಲ್ ಡೇ ಲೂಯಿಸ್, ಬ್ರಿಟನ್ ರಾಣಿ ಕೇಟ್ ಮಿಡ್ಲ್‌ಟನ್, ಅಮೆರಿಕದ ಸೆನೆಟರ್ ರ್ಯಾಂಡ್‌ಪಾಲ್, ಚೀನಾದ ಕ್ಸೀ ಜಿಂಪಿಂಗ್, ಮ್ಯಾನ್ಮಾರ್‌ನ ವಿಪಕ್ಷ ನಾಯಕಿ ಆಂಗ್‌ಸಾನ್ ಸೂಕಿ, ದಕ್ಷಿಣ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಸೇರಿದಂತೆ ಇತ್ತೀಚೆಗೆ ಪೋಪ್ ಆಗಿ ಅಧಿಕಾರ ಸ್ವೀಕರಿಸಿದ ಪೋಪ್ ಫ್ರಾನ್ಸಿಸ್ ಅವರು ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.
ಅಂತೆಯೇ ಕ್ರೀಡಾ ಕ್ಷೇತ್ರದ ತಾರೆಯರಾದ ಇಟಲಿ ಫುಟ್‌ಬಾಲ್ ತಂಡದ ಆಟಗಾರ ಮಾರಿಯೋ ಬ್ಯಾಲೋಟೆಲಿ, ಬ್ಯಾಸ್ಕೆಟ್‌ಬಾಲ್ ಆಟಗಾರ ಲಿಬ್ರಾನ್ ಜೇಮ್ಸ್, ಸ್ಕೀಯಿಂಗ್ ಆಟಗಾರ ಲಿಂಡ್ಸೆ ವಾನ್ನ್, ವಿಶ್ವ ಶ್ರೇಷ್ಟ ಗಾಲ್ಫ್ ಆಟಗಾರ ಟೈಗರ್‌ವುಡ್ಸ್ ಸಹ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.
ಪಾಕಿಸ್ತಾನದಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ಹೋರಾಟ ನಡೆಸಿ, ತಾಲಿಬಾನ್ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮಲಾಲ ಯೂಸುಫ್‌ಝೈ ಮೇಲೆ ತಾಲಿಬಾನ್ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ದಾಳಿಯನ್ನು ಖಂಡಿಸಿ ಪಾಕಿಸ್ತಾನದಾದ್ಯಂತ ತೀವ್ರ ಪ್ರತಿಭಟನೆಗಳು ಜರುಗಿದ್ದವು. ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು. ಪ್ರಕರಣದ ಗಂಭೀರತೆಯನ್ನು ಅರಿತ ಪಾಕಿಸ್ತಾನ ಸರ್ಕಾರ ಮಲಾಲಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೈನಿಕ ಆಸ್ಪತ್ರೆಯಿಂದ ಬ್ರಿಟನ್‌ಗೆ ರವಾನಿಸಿತ್ತು. ತಲೆ ಮತ್ತು ಎದೆಯ ಭಾಗದಲ್ಲಿ ಗುಂಡೇಟು ತಿಂದಿದ್ದ ಮಲಾಲಾ, ಸತತ ಮೂರು ತಿಂಗಳುಗಳ ವೈದ್ಯಕೀಯ ಚಿಕಿತ್ಸೆಯ ನಂತರ ಗುಣಮುಖಳಾಗಿದ್ದಾಳೆ.
ಇದೀಗ ಪಾಕಿಸ್ತಾನವನ್ನು ತೊರೆದಿರುವ ಮಲಾಲ ಕುಟುಂಬ, ಬ್ರಿಟನ್‌ನಲ್ಲಿಯೇ ನೆಲೆಯೂರಿದ್ದಾರೆ. ಆದರೆ ಪಾಕಿಸ್ತಾನದ ಬಾಲಕಿಯರಿಗೆ ಶಿಕ್ಷಣ ಕೊಡಿಸುವ ತನ್ನ ಹೋರಾಟ ನಿಲ್ಲುವುದಿಲ್ಲ ಎಂದು ಮಲಾಲ ಹೇಳಿದ್ದಾಳೆ.