ಆಫ್ಘನ್ನಲ್ಲಿ ತಾಲಿಬಾನ್ ಮುಖಂಡನ ಬಂಧನ
ಕಾಬುಲ್: ಆಫ್ಘಾನಿಸ್ತಾನದಲ್ಲಿ ವಿದ್ಯಾರ್ಥಿಗಳಿಗೆ ಆತ್ಮಹತ್ಯಾ ಬಾಂಬ್ ದಾಳಿಯ ತರಬೇತಿ ನೀಡುತ್ತಿದ್ದ ತಾಲಿಬಾನ್ ಮುಖಂಡನನ್ನು ಬಂಧಿಸಲಾಗಿದೆ.
ಅಂತಾರಾಷ್ಟ್ರೀಯ ಭದ್ರತಾ ಸಹಾಯಕ ಪಡೆ(ಐಎಎಸ್ಎಫ್) ಮತ್ತು ಆಫ್ಘನ್ ಸಮ್ಮಿಶ್ರ ಭದ್ರತಾ ಪಡೆಗಳು ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಿ, ಹೆಲಮಂಡ್ ಮತ್ತು ಕಾಂದಹಾರ್ ಪ್ರಾಂತ್ಯಗಳಲ್ಲಿ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದ ಉಗ್ರನನ್ನು ಬಂಧಿಸಿದ್ದಾರೆ. ಹೆಲಮಂಡ್ ಪ್ರಾಂತ್ಯದ ನಾಹ್ರ್-ಇ-ಸರಾಜ್ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ತಾಲಿಬಾನ್ ತರಬೇತಿ ಶಿಬಿರಗಳ ಕುರಿತು ಮಾಹಿತಿ ಪಡೆದ ಐಎಎಸ್ಎಫ್ ಮತ್ತು ಆಫ್ಘನ್ ಸಮ್ಮಿಶ್ರ ಭದ್ರತಾ ಪಡೆಗಳು ಒಮ್ಮೆಲೆ ದಾಳಿ ನಡೆಸಿ, ಹಲವು ಉಗ್ರರ ಸಮೇತ ತಾಲಿಬಾನ್ ಮುಖಂಡನನ್ನು ಬಂಧಿಸಿವೆ.
ಬಂಧಿತ ಉಗ್ರ ನಾಯಕನನ್ನು ಹಕಾನಿ ಸಮೂಹದ ಉಗ್ರ ಎಂದು ಗುರುತಿಸಲಾಗಿದೆ. ದಾಳಿ ವೇಳೆ ಇಬ್ಬರು ಉಗ್ರರು ಹತರಾಗಿದ್ದು, ಹಲವು ಯೋಧರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅಲ್ಲದೆ ಘಟನಾ ಸ್ಥಳದಿಂದ 2 ಎಕೆ47 ಬಂದೂಕು, ನಾಲ್ಕು ಮ್ಯಾಗಜಿನ್ಗಳು ಮತ್ತು 60 ಪೌಂಡ್ ಸ್ಫೋಟಕ್ಕೆ ಬಳಸುವ ರಾಸಾಯನಿಕ ಮಿಶ್ರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಉಗ್ರ ಹೆಲಮಂಡ್ ಮತ್ತು ಕಾಂದಹಾರ್ ಪ್ರಾಂತ್ಯಗಳಲ್ಲಿ ಶಸ್ತ್ರಾಸ್ತ್ರಗಳ ವಿನಿಮಯದ ಮೇಲ್ವಿಚಾರಣೆ ಮತ್ತು ಸುಧಾರಿತ ಸ್ಪೋಟಕ (ಐಇಡಿ)ಗಳನ್ನು ಬಳಸುವ ಕುರಿತು ತರಬೇತಿ ನೀಡುತ್ತಿದ್ದನು. ಅಲ್ಲದೆ ತಾಲಿಬಾನ್ ಮುಖಂಡರಿಂದ ಆಜ್ಞೆ ಬಂದಾಗ ಯುವಕರನ್ನು ಮತ್ತು ಉಗ್ರರನ್ನು ಅವರಿಗೆ ರವಾನಿಸುತ್ತಿದ್ದನು ಎಂದು ತಿಳಿದುಬಂದಿದೆ.