ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಷರ್ರಫ್‌ಗೆ ಮೇ 4ರವರೆಗೆ ನ್ಯಾಯಾಂಗ ಬಂಧನ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಅವರನ್ನು ಮೇ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Srinivasa Murthy VN
Updated On : 20 Apr 2013, 4:00 am

ಇಸ್ಲಾಮಾಬಾದ್: ನ್ಯಾಯಾಧೀಶರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಅವರನ್ನು ಮೇ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

2007ರಲ್ಲಿ ಸಂವಿಧಾನವನ್ನು ಅಮಾನತಿನಲ್ಲಿಟ್ಟು, ಪಾಕಿಸ್ತಾನದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದ ಮತ್ತು ಇದಕ್ಕಾಗಿ ತಮಗೆ ಬೇಕಾದ ನ್ಯಾಯಾಧೀಶರನ್ನು ಅಕ್ರಮವಾಗಿ ನೇಮಿಸಿಕೊಂಡ ಆರೋಪದ ಮೇಲೆ ಬಂಧಿತರಾಗಿರುವ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಅವರನ್ನು ಇಸ್ಲಾಮಾಬಾದ್ ವಿಶೇಷ ನ್ಯಾಯಾಲಯ ಮೇ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇಸ್ಲಾಮಾಬಾದಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ವಿಶೇಷ ನ್ಯಾಯಮೂರ್ತಿ ಖೌಸರ್ ಅಬ್ಬಾಸ್ ಜೈದಿ ಅವರು ಮುಷರ್ರಫ್ ಪ್ರಕರಣವನ್ನು ಇಂದು ವಿಚಾರಣೆ ನಡೆಸಿ, 69 ವರ್ಷದ ಪಾಕ್ ಮಾಜಿ ಅಧ್ಯಕ್ಷ ಮುಷರ್ರಫ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆದರೆ ನ್ಯಾಯಾಲಯದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮುಷರ್ರಫ್ ಪರ ವಕೀಲ ಖಾಮರ್ ಅಫ್ಜಲ್ ಅವರು, ಭದ್ರತಾ ಕಾರಣಗಳಿಂದ ಮುಷರ್ರಫ್ ಅವರನ್ನು ದೀರ್ಘ ಸಮಯ ಬಂಧನದಲ್ಲಿಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಅಲ್ಲದೆ ನ್ಯಾಯಾಲಯದ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

'ಮುಷರ್ರಫ್ ಅವರ ಬಂಧನದಲ್ಲಿ ರಾಜಕೀಯ ಪ್ರೇರಿತ ಷಡ್ಯಂತ್ರವಿದ್ದು, ಪ್ರಕರಣವನ್ನು ಮತ್ತೆ ಮೊದಲಿನಿಂದ ತನಿಖೆಗೊಳಪಡಿಸುವಂತೆ ಸುಪ್ರೀಂಕೋರ್ಟ್‌ನಲ್ಲಿ ಕೋರಲಾಗುವುದು' ಎಂದು ಮುಷರ್ರಫ್ ಪರ ವಕೀಲ ಖಾಮರ್ ಅಫ್ಜಲ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement