ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಹಿಳಾ ರಕ್ಷಣೆಗೆ ವ್ಯಾಪಕ ಸುಧಾರಣೆ ಅಗತ್ಯ: ಪ್ರಧಾನಿ ಸಿಂಗ್

ದೇಶದಲ್ಲಿ ಮಹಿಳೆಯರ ರಕ್ಷಣೆಗೆ ವ್ಯಾಪಕ ಸುಧಾರಣೆ ತರುವ ಅಗತ್ಯವಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದಾರೆ.

Srinivasa Murthy VN
Updated On : 21 Apr 2013, 2:53 am

ನವದೆಹಲಿ: ದೇಶದಲ್ಲಿ ಮಹಿಳೆಯರ ರಕ್ಷಣೆಗೆ ವ್ಯಾಪಕ ಸುಧಾರಣೆ ತರುವ ಅಗತ್ಯವಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ 5ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಹಿನ್ನಲೆಯಲ್ಲಿ ಮಾತನಾಡಿದ ಮನಮೋಹನ್ ಸಿಂಗ್ ಅವರು, 'ದೇಶದಲ್ಲಿ ಸ್ತ್ರೀಯರ ಸ್ಥಾನಮಾನ ಮತ್ತು ರಕ್ಷಣೆ ವಿಚಾರದಲ್ಲಿ ವ್ಯಾಪಕ ಸುಧಾರಣೆ ತರುವ ಅಗತ್ಯವಿದೆ. ಪುಟ್ಟ ಬಾಲಕಿಯ ಮೇಲೆ ನಡೆದ ಪಾಪಕೃತ್ಯ ನಮ್ಮನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಮಹಿಳಾ ರಕ್ಷಣೆಯ ವಿಚಾರದಲ್ಲಿ ನಾವು ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು' ಎಂದು ಹೇಳಿದರು.

ಅಲ್ಲದೆ ಅತ್ಯಾಚಾರವನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿರುವ ಸಿಂಗ್, 'ಪ್ರಸಕ್ತ ಪ್ರತಿಭಟನೆ ಮಹಿಳೆಯರ ಮೇಲಿನ ಕಾಳಜಿ ಮತ್ತು ಸಾರ್ವಜನಿಕ ಆತಂಕವನ್ನು ತೋರಿಸುತ್ತದೆ. ಮಹಿಳಾ ರಕ್ಷಣೆ ಮತ್ತು ಮಹಿಳೆಯ ವಿರುದ್ಧ ಅಪರಾಧ ಕುರಿತಾದ ಕಾನೂನುಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಅವಶ್ಯಕತೆ ಇದ್ದು, ಈ ಬಗ್ಗೆ ಸರ್ಕಾರ ಮತ್ತಷ್ಟು ವೇಗವಾಗಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಇದೆ' ಎಂದು ಹೇಳಿದರು.

ಪುಟ್ಟ ಬಾಲಕಿಯ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದು ಕೂಡ ಮುಂದುವರೆದಿದ್ದು, ರಾಷ್ಟ್ರಪತಿ ಭವನ, ದೆಹಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ಅವರ ಕಚೇರಿ, ಪೊಲೀಸ್ ಪ್ರಧಾನ ಕಚೇರಿ ಮತ್ತು ಪ್ರಧಾನಿ ಕಚೇರಿಗಳ ಮುಂದೆ ನೂರಾರು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಧಾನಿ ದೆಹಲಿಯಲ್ಲಿ 2ನೇ ಬಾರಿಗೆ ಇಂತಹ ಪ್ರತಿಭಟನೆ ನಡೆಯುತ್ತಿದ್ದು, ನಿರ್ಭಯಾ ಪ್ರಕರಣದ ವೇಳೆಯಲ್ಲಿಯೂ ದೆಹಲಿ ಇದೇ ರೀತಿ ಪ್ರಕ್ಷುಬ್ದಗೊಂಡಿತ್ತು. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕರಣ ಗಮನ ಸೆಳೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement