ತೀವ್ರಗೊಂಡ ಪ್ರತಿಭಟನೆ, 3 ಮೆಟ್ರೋ ನಿಲ್ದಾಣ ಸ್ಥಗಿತ
ಅತ್ಯಾಚಾರವನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ 3 ಮೆಟ್ರೋ ರೈಲು ನಿಲ್ದಾಣಗಳ ಕಾರ್ಯ ಸ್ಥಗಿತ.
ನವದೆಹಲಿ: 5 ವರ್ಷದ ಪುಟ್ಟ ಬಾಲಕಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಸೋಮವಾರವು ಮುಂದುವರೆದಿದ್ದು, ಪ್ರತಿಭಟನೆಯಿಂದಾಗಿ ದೆಹಲಿಯ ಮೂರು ಮೆಟ್ರೋ ರೈಲು ನಿಲ್ದಾಣಗಳು ಸ್ಥಗಿತಗೊಂಡಿವೆ.
ದೆಹಲಿಯ ಹೃದಯ ಭಾಗಗಳಾದ ರಾಷ್ಟ್ರಪತಿ ಭವನ, ಸಂಸತ್, ಪ್ರಧಾನಿ ನಿವಾಸಗಳನ್ನು ಸಂಪರ್ಕಿಸುವ ರಸ್ತೆಗಳು ಬಹುತೇಕ ಮುಚ್ಚಿದ್ದು, ಪ್ರತಿಭಟನಾಕಾರರು ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತೆಯೇ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ನಿವಾಸ ಜನಪತ್, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಆಡಳಿತ ಕಚೇರಿ, ಪ್ರಧಾನಿಗಳ ಕಚೇರಿಗಳ ಬಳಿಯೂ ಪ್ರತಿಭಟನಾಕಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸಪಡುತ್ತಿದ್ದು, ಲಾಠಿ ಪ್ರಹಾರಗಳು ಸಾಮಾನ್ಯದಂತಾಗಿವೆ. ಅಲ್ಲದೆ ಪ್ರತಿಭಟನೆಯ ಬಿಸಿ ಮೆಟ್ರೋ ರೈಲುಗಳಿಗೂ ತಗುಲಿದ್ದು, ಭದ್ರತಾ ದೃಷ್ಟಿಯಿಂದ ದೆಹಲಿಯ 3 ಮೆಟ್ರೋ ರೈಲು ನಿಲ್ದಾಣಗಳನ್ನು ಮುಚ್ಚಲಾಗಿದೆ. ದೆಹಲಿ ರೇಸ್ಕೋರ್ಸ್ ರಸ್ತೆಯ ನಿಲ್ದಾಣ, ಕೇಂದ್ರೀಯ ಸಚಿವಾಲಯದ ಬಳಿಯ ನಿಲ್ದಾಣ ಮತ್ತು ಉದ್ಯೋಗಭವನದ ಬಳಿ ಇರುವ ಮೆಟ್ರೋ ರೈಲು ನಿಲ್ದಾಣಗಳನ್ನು ಮುಚ್ಚಲಾಗಿದೆ.
ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ದೆಹಲಿಯ ಏಮ್ಸ್ ಆಸ್ಪತ್ರೆಯ ಬಳಿ ಕೂಡ ಸಾವಿರಾರು ಪ್ರತಿಭಟನಾಕಾರರು ನೆರೆದಿದ್ದು, ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಬಿಜೆಪಿ ಮಹಿಳಾ ವಿಭಾಗದ ಕಾರ್ಯಕರ್ತರು ಕೇಜ್ರಿವಾಲ್ಗೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರದ ಶಂಕೆ
ಈ ನಡುವೆ ಪೊಲೀಸರು ಬಂಧಿಸಿರುವ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಮನೋಜ್ಕುಮಾರ್ನನ್ನು ನ್ಯಾಯಾಲಯ ನಿನ್ನೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇಂದು ಆರೋಪಿಯನ್ನು ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಆಘಾತಕಾರಿ ಮಾಹಿತಿಯೊಂದು ತಿಳಿದಿದೆ. ಬಾಲಕಿ ಮೇಲೆ ತಾನೊಬ್ಬನೇ ಅಲ್ಲದೆ ಆತನ ಸ್ನೇಹಿತ ಕೂಡ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿ ಮನೋಜ್ ಕುಮಾರ್ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ರೀತಿಯ ಸ್ಪಷ್ಟೀಕರಣ ನೀಡದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.