ಬಾಂಗ್ಲಾ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಅವಿರೋಧ ಆಯ್ಕೆ
ಪಾರ್ಲಿಮೆಂಟ್ ಸ್ಪೀಕರ್ ಅಬ್ದುಲ್ ಹಮೀದ್ ಅವರು ಬಾಂಗ್ಲಾದೇಶದ 20ನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಢಾಕಾ: ಬಾಂಗ್ಲಾದೇಶದ ಹಿರಿಯ ರಾಜಕಾರಣಿ ಮತ್ತು ಪಾರ್ಲಿಮೆಂಟ್ ಸ್ಪೀಕರ್ ಅಬ್ದುಲ್ ಹಮೀದ್ ಅವರು ದೇಶದ 20ನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರಧಾನಿ ಶೇಖ್ ಹಸೀನಾ ಅವರ ನಿಕಟವರ್ತಿಯಾಗಿರುವ 69 ವರ್ಷದ ಅಬ್ದುಲ್ ಹಮೀದ್ ಅವರು ಅವಾಮಿ ಲೀಗ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಾಂಗ್ಲಾದೇಶದ ಮುಖ್ಯ ಚುನಾವಣಾ ಆಯುಕ್ತ ಖಾಝಿ ರಕೀಬುದ್ದೀನ್ ಅಹ್ಮದ್ ಅವರು, ದೇಶದ 20ನೇ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಅನಾರೋಗ್ಯಕ್ಕೆ ತುತ್ತಾಗಿ ಸಿಂಗಾಪುರದ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಧ್ಯಕ್ಷ ಝಿಲ್ಲುರ್ ರೆಹಮಾನ್ ಅವರು ಕಳೆದ ಮಾರ್ಚ್ 20 ರಂದು ನಿಧನರಾಗಿದ್ದರು. ಅವರು ನಿಧನರಾಗುವವರೆಗೂ ಅಬ್ದುಲ್ ಹಮೀದ್ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಝಿಲ್ಲರ್ ರೆಹಮಾನ್ ಮರಣಾನಂತರ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ಏರ್ಪಾಟಾಗಿತ್ತು. ಆಡಳಿತಾರೂಢ ಅಮಾಮಿ ಲೀಗ್ ಪಕ್ಷ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಅಬ್ದುಲ್ ಹಮೀದ್ ಅವರನ್ನು ಆಯ್ಕೆ ಮಾಡಿ, ನಿನ್ನೆ ಅವರಿಂದ ನಾಮಪತ್ರ ಸಲ್ಲಿಸಿತ್ತು.
ಅಬ್ದುಲ್ ಹಮೀದ್ ಅವರಿಗೆ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ, ಅವರನ್ನು ಬಾಂಗ್ಲಾದೇಶದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.