ಬಾಲಕಿ ಮೇಲೆ ಅತ್ಯಾಚಾರ :2ನೇ ಆರೋಪಿ ಬಂಧನ
ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ 2ನೇ ಆರೋಪಿಯನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿ.
ನವದೆಹಲಿ: 5 ವರ್ಷದ ಪುಟ್ಟ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣದ 2ನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಪ್ರದೀಪ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಪ್ರಕರಣದ ಮೊದಲ ಆರೋಪಿ ಮನೋಜ್‌ಕುಮಾರ್‌ನ ಸ್ನೇಹಿತ ಎಂದು ತಿಳಿದುಬಂದಿದೆ. ಬಾಲಕಿ ಮೇಲೆ ನಡೆದ ದೌರ್ಜನ್ಯದಲ್ಲಿ ಮನೋಜ್ ಕುಮಾರ್ ಮಾತ್ರವಲ್ಲದೆ ಮತ್ತೊಬ್ಬನ ಪಾತ್ರವಿದೆ ಎಂದು ಬಾಲಕಿಯ ಪೋಷಕರು ಮೊದಲಿನಿಂದಲೂ ಆರೋಪಿಸುತ್ತಿದ್ದರು. ಆದರೆ ಪೊಲೀಸರು ಈ ಬಗ್ಗೆ ಯಾವುದೇ ಸ್ಫಷ್ಟೀಕರಣ ನೀಡಿರಲಿಲ್ಲ.
ವಿಚಾರಣೆ ವೇಳೆ ಪ್ರಕರಣದ ಮೊದಲ ಆರೋಪಿ ಮನೋಜ್ ಕುಮಾರ್, ಅತ್ಯಾಚಾರದಲ್ಲಿ ತನ್ನ ಸ್ನೇಹಿತ ಕೂಡ ಪಾಲ್ಗೊಂಡಿದ್ದ ಎಂದು ಹೇಳಿಕೆ ನೀಡಿದ್ದ. ಆತ ನೀಡಿದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರು ಇಂದು ಬಿಹಾರದಲ್ಲಿ ಅತ್ಯಾಚಾರದ ಮತ್ತೋರ್ವ ಆರೋಪಿ ಪ್ರದೀಪ್ ಕುಮಾರ್‌ನನ್ನು ಬಂಧಿಸಿದ್ದಾರೆ.
ಕಳೆದ ಸೋಮವಾರ ದಕ್ಷಿಣ ದೆಹಲಿಯ ಗಾಂಧಿನಗರದಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ನೆರೆಮನೆಯಲ್ಲಿದ್ದ ಮನೋಜ್ ಕುಮಾರ್ ಎಂಬಾತ ಅಪಹರಿಸಿ, ತಾನು ನೆಲೆಸಿದ್ದ ಗಾಂಧಿನಗರದ ಅಪಾರ್ಟ್‌ಮೆಂಟ್‌ನ ನೆಲಮಹಡಿಯ ಕೊಠಡಿಯಲ್ಲಿ ಕೂಡಿಹಾಕಿದ್ದನು. ಬಾಲಕಿಗೆ ಆಹಾರ ಮತ್ತು ನೀರನ್ನು ನೀಡದೆ ಸತತ 2 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದನು. ಪ್ರಕರಣ ಬೆಳಕಿಗೆ ಬಂದ ನಂತರ ಬಂಧಿತನಾಗಿದ್ದ ಆರೋಪಿ ಮನೋಜ್ ಕುಮಾರ್, ಅತ್ಯಾಚಾರದಲ್ಲಿ ತನ್ನ ಸ್ನೇಹಿತ ಪ್ರದೀಪ್ ಕುಮಾರ್ ಸಹ ಪಾಲ್ಗೊಂಡಿದ್ದ ಎಂದು ಹೇಳಿಕೆ ನೀಡಿದ್ದನು.