ಬೆಂಗಳೂರು ಸ್ಫೋಟ: ಎನ್ಸಿಟಿಸಿ ಸ್ಥಾಪನೆಗೆ ಕೇಂದ್ರ ಒಲವು
ಬೆಂಗಳೂರಿನಲ್ಲಿ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಒಲವು ತೋರಿದೆ.
ಬೆಂಗಳೂರು: ಬಿಜೆಪಿ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ನಂತರ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಬೆಂಗಳೂರಿನಲ್ಲಿ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್ಸಿಟಿಸಿ) ಸ್ಥಾಪನೆಗೆ ಒಲವು ತೋರಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಲೋಕಸಭಾ ಅಧಿವೇಶನದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು, ದೇಶದಲ್ಲಿ ಭಯೋತ್ಪಾದನೆಯ ಕರಿನೆರಳಿರುವ ರಾಜ್ಯಗಳಲ್ಲಿ ಗುಪ್ತಚರ ಇಲಾಖೆಯನ್ನು ಬಲಪಡಿಸುವ ಅಗತ್ಯವಿದೆ. ಈ ಬಗ್ಗೆ ಎಲ್ಲ ರಾಜ್ಯಗಳಿಗೂ ಸೂಚನೆ ಮತ್ತು ಸಲಹೆ ನೀಡಿದ್ದೇವೆ. ಆದರೆ ಆ ರಾಜ್ಯಗಳಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುತ್ತಿಲ್ಲ' ಎಂದು ಹೇಳಿದರು.
'ಗುಪ್ತಚರ ಇಲಾಖೆಯಲ್ಲಿ 'ಮಾನವ ಗುಪ್ತಚರ ಘಟಕ'ವನ್ನು ಬಲಪಡಿಸುವ ಅಗತ್ಯವಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಅಂತೆಯೇ ಉಗ್ರರ ಸಾಫ್ಟ್ ಟಾರ್ಗೆಟ್ ಆಗಿರುವ ರಾಜ್ಯಗಳಲ್ಲಿ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆದರೆ ಇದಕ್ಕೆ ಆ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಎನ್ಸಿಟಿಸಿ ಸ್ಥಾಪನೆಯಿಂದ ಸಾಂವಿಧಾನಿಕ ಬಿಕ್ಕಟ್ಟು ತಲೆದೋರುತ್ತವೆ ಎನ್ನಲಾಗುತ್ತಿದೆ ಎಂದು ಶಿಂಧೆ ಹೇಳಿದರು.
ಅಲ್ಲದೆ ಬೆಂಗಳೂರು ಬಾಂಬ್ ಸ್ಫೋಟ ಕುರಿತು ಮಾತನಾಡಿದ ಶಿಂಧೆ, ಸ್ಫೋಟಕ್ಕೆ ಉಗ್ರರು ಸುಧಾರಿತ ಸ್ಫೋಟಕ(ಐಇಡಿ) ತಂತ್ರಜ್ಞಾನವನ್ನು ಬಳಸಿದ್ದಾರೆ. ಮೋಟಾರ್ ಬೈಕ್ನ ಪೆಟ್ರೋಲ್ ಟ್ಯಾಂಕ್ ಕೆಳಗೆ ಬಾಂಬ್ ಅಳವಡಿಸಿ, ಬೆಳಗ್ಗೆ 10.15ರಲ್ಲಿ ಸ್ಫೋಟಿಸಿದ್ದಾರೆ. ಸ್ಫೋಟದಲ್ಲಿ ಯಾವುದೇ ಸಾವುಗಳಾಗಿಲ್ಲ. ಆದರೆ ಸ್ಫೋಟದ ತೀವ್ರತೆಗೆ 16 ಮಂದಿಗೆ ಗಾಯಗಳಾಗಿದ್ದವು. ಪ್ರಕರಣವನ್ನು ರಾಷ್ಟ್ರೀಯ ತನಿಖಾದಳ ತನಿಖೆ ನಡೆಸುತ್ತಿದ್ದು, ಈಗಾಗಲೇ ಸುಮಾರು 50 ಸಾಕ್ಷ್ಯಗಳನ್ನು ಸಂಗ್ರಹಿಸಿವೆ ಎಂದು ಸಚಿವ ಶಿಂಧೆ ಹೇಳಿದರು.