ಡಿವೈಎಸ್ಪಿ ಹತ್ಯೆ: ರಾಜಾಭಯ್ಯಾ ಅಂಗರಕ್ಷಕ ಸೇರಿ 7 ಮಂದಿ ಬಂಧನ
ಡಿಎವೈಎಸ್ಪಿ ಹತ್ಯೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಬುಧವಾರ ಮಾಜಿ ಸಚಿವ ರಾಜಾಭಯ್ಯಾ ಅವರ ಅಂಗರಕ್ಷಕ ಸೇರಿದಂತೆ ಒಟ್ಟು 7 ಮಂದಿಯನ್ನು ಬಂಧಿಸಿದ್ದಾರೆ.
ಲಖನೌ: ಡಿಎವೈಎಸ್ಪಿ ಹತ್ಯೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಬುಧವಾರ ಮಾಜಿ ಸಚಿವ ರಾಜಾಭಯ್ಯಾ ಅವರ ಅಂಗರಕ್ಷಕ ಸೇರಿದಂತೆ ಒಟ್ಟು 7 ಮಂದಿಯನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಇಂದು ಕಾರ್ಯಾಚರಣೆ ನಡೆಸಿದ ಸಿಬಿಐ ಅಧಿಕಾರಿಗಳು ಕುಂಡಾ ಗ್ರಾಮದಲ್ಲಿ ಬುಲ್ಲೇ ಪಾಲ್ ಎಂಬ ರಾಜಾಭಯ್ಯಾ ಅವರ ಅಂಗರಕ್ಷಕ ಸೇರಿದಂತೆ ಚೋಟೆಲಾಲ್ ಯಾದವ್, ಗನ್ಶ್ಯಾಮ್ ಸರೋಜ್, ರಾಮ್ಲಖನ್ ಗೌತಮ್, ರಾಮಶ್ರೇ, ಶಿವರಾಂ ಪಾಸಿ, ಮುನ್ನಾ ಪಟೇಲ್ ಎಂಬ 7ಮಂದಿ ಗ್ರಾಮದ ನಿವಾಸಿಗಳನ್ನು ಬಂಧಿಸಿದ್ದಾರೆ. ಅಧಿಕಾರಿಗಳು ಬಂಧಿಸಿರುವ ಈ ಏಳು ಮಂದಿ ಉತ್ತರ ಪ್ರದೇಶದ ಪ್ರತಾಪ್ಗಡ ಜಿಲ್ಲೆಯ ಕುಂಡಾ ಡಿವೈಎಸ್ಪಿ ಜಿಯಾ-ಉಲ್-ಹಕ್ ಅವರನ್ನು ಹತ್ಯೆ ಮಾಡಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದು, ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಇಂದಿನ ಸಿಬಿಐ ಕಾರ್ಯಾಚರಣೆಯಿಂದಾಗಿ ಪ್ರಕರಣದಲ್ಲಿ ಅಧಿಕಾರಿಗಳು ಬಂಧಿಸಿರುವ ಆರೋಪಿಗಳ ಸಂಖ್ಯೆ ಒಟ್ಟು 11 ಕ್ಕೇರಿದೆ. ಇದಕ್ಕೂ ಮೊದಲು ಪ್ರಕರಣ ಸಂಬಂಧ ಅಂದು ಕೊಲೆಯಾದ ಕುಂಡಾ ಗ್ರಾಮದ ಮುಖಂಡ ನನ್ಹೆಯಾದವ್ ಅವರ ಪುತ್ರ ಸೇರಿದಂತೆ 4 ಮಂದಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.