ಪತ್ನಿ ವಿನಿಮಯ: ಹೈಕೋರ್ಟ್ ಮೆಟ್ಟಿಲೇರಿದ ಅಧಿಕಾರಿ ಪತ್ನಿ
ಪತ್ನಿ ವಿನಿಮಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಕಾಪಡೆಯ ಅಧಿಕಾರಿಯ ಪತ್ನಿ ಬುಧವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕೊಚ್ಚಿ: ಪತ್ನಿ ವಿನಿಮಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಕಾಪಡೆಯ ಅಧಿಕಾರಿಯ ಪತ್ನಿ ಬುಧವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹಿರಿಯ ಅಧಿಕಾರಿಗಳೊಂದಿಗೆ ತಮ್ಮ ಪತ್ನಿಯನ್ನು ಹಂಚಿಕೊಂಡ ಆರೋಪ ಎದುರಿಸುತ್ತಿರುವ ನೌಕಾಪಡೆ ಅಧಿಕಾರಿ ಲೆಫ್ಟಿನೆಂಟ್ ರವಿ ಕಿರಣ್ ಅವರು, ಪ್ರಕರಣ ಸಂಬಂಧ ತಮಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೇರಳ ಹೈಕೋರ್ಟ್ ಮೊರೆಹೋಗುತ್ತಿದ್ದಂತೆಯೇ ಇತ್ತ ಅವರ ಪತ್ನಿ, ತಮ್ಮ ಪತಿಗೆ ಜಾಮೀನು ನೀಡಬಾರದು ಎಂದು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
'ತಮ್ಮ ಪತ್ನಿಯ ಆರೋಪಗಳು ನಿರಾಧಾರವಾಗಿದ್ದು, ತಾವು ಆಂತಹ ಕೃತ್ಯದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ತಮಗೆ ನಿರೀಕ್ಷಣಾ ಜಾಮೀನು ನೀಡಬೇಕು ಮತ್ತು ತಮ್ಮ ಪ್ರಕರಣ ವಿವಾಹ ವಿಚ್ಛೇದನ ಪ್ರಕರಣ ಎಂದು ಭಾವಿಸಿ ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಬೇಕು' ಎಂದು ನೌಕಾಪಡೆ ಅಧಿಕಾರಿ ರವಿಕಿರಣ್ ಅವರು ನಿನ್ನೆ ಹೈ ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಆದರೆ ಇಂದು ಅವರ ಪತ್ನಿ, ಭಾರತೀಯ ದಂಡಸಂಹಿತೆ 498ರ ಅಡಿಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಅಪರಾಧ ಕೃತ್ಯಕ್ಕಾಗಿ ತಮನ್ನು ಕೂಡಿಹಾಕಿದ್ದರು ಎಂದು ಆರೋಪಿಸಿ ಹೈಕೋರ್ಟ್ನಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ರವಿ ಕಿರಣ್ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರಕರಣ ಸಂಬಂಧ ನೌಕಾಪಡೆ ಅಧಿಕಾರಿಯ ಪತ್ನಿ ಈಗಾಗಲೇ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನೌಕಾಪಡೆ ಇಲಾಖೆಯಲ್ಲಿಯೂ ದೂರು ದಾಖಲಿಸಿದ್ದಾರೆ. 'ತಮ್ಮ ಪತಿ ರವಿಕಿರಣ್ ಅವರು ವರದಕ್ಷಿಣೆಗಾಗಿ ತಮಗೆ ನಿತ್ಯಕಿರುಕುಳ ನೀಡುತ್ತಿದ್ದರು. ಅಲ್ಲದೆ ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ತಮ್ಮನ್ನು ಹಂಚಿಕೊಳ್ಳಲು ಪ್ರಯತ್ನಿಸಿದ್ದರು. ನೌಕಾಪಡೆಯ 10 ಹಿರಿಯ ಅಧಿಕಾರಿಗಳು ತಮಗೆ ಲೈಂಗಿಕ ಕಿರುಕುಳ ನೀಡಿದರು' ಎಂದು ಮಹಿಳೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ದೂರು ದಾಖಲಸಿಕೊಂಡಿರುವ ಇಲಾಖೆಯ ಅಧಿಕಾರಿಗಳು, ತನಿಖೆಯನ್ನು ಮುಂದುವರೆಸಿದ್ದಾರೆ. ಆದರೆ ಮಹಿಳೆಯ ದೂರು ನಿರಾಧಾರ ಎಂದು ಆರೋಪಿಸಿರುವ ನೌಕಾಪಡೆಯ ಮೂಲಗಳು, ಅವರ ವೈವಾಹಿಕ ಜೀವನ ಮುರಿದು ಬಿದ್ದಿದ್ದರಿಂದ ಆಕೆ ಮಾನಸಿಕ ಸ್ಥೀಮಿತ ಕಳೆದುಕೊಂಡು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.