ಗಡಿ ಅತಿಕ್ರಮಣ: ಆಂಟನಿ ಭೇಟಿ ಮಾಡಿದ ಬಿಕ್ರಂ ಸಿಂಗ್
ಚೀನಾ ಯೋಧರ ಗಡಿ ಅತಿಕ್ರಮಣ ವಿಚಾರಕ್ಕೆ ಸಂಬಂಧಿಸಿಂತೆ ಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್ ಅವರು ರಕ್ಷಣಾ ಸಚಿವ ಆಂಟನಿ ಅವರನ್ನು ಭೇಟಿ ಮಾಡಿದ್ದಾರೆ.
ನವದೆಹಲಿ: ಚೀನಾ ಯೋಧರು ಭಾರತದ ಗಡಿ ಪ್ರದೇಶವನ್ನು ಅತಿಕ್ರಿಮಿಸಿರುವ ವಿಚಾರಕ್ಕೆ ಸಂಬಂಧಿಸಿಂತೆ ಗುರುವಾರ ಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್ ಅವರು ಕೇಂದ್ರ ರಕ್ಷಣಾ ಸಚಿವ ಆಂಟನಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ನಿನ್ನೆ ಸ್ವತಃ ಭಾರತೀಯ ಸೇನಾ ಮುಖ್ಯಸ್ಥ ಬಿಕ್ರಂ ಸಿಂಗ್ ಅವರು ಕಾಶ್ಮೀರಕ್ಕೆ ಭೇಟಿ ನೀಡಿ ಪ್ರಸಕ್ತ ಬೆಳವಣಿಗಳನ್ನು ಗಮನಿಸಿದ್ದರು. ಅಲ್ಲದೆ ಸ್ಥಳೀಯ ಸೇನಾ ಬ್ರಿಗೇಡಿಯರ್ಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದರು. ಜ.ಬಿಕ್ರಂ ಸಿಂಗ್ ಅವರು ನಿನ್ನೆ ಕಾಶ್ಮೀರದಿಂದ ನೇರವಾಗಿ ದೆಹಲಿಗೆ ಆಗಮಿಸಿದ್ದರು. ಇಂದು ರಕ್ಷಣಾ ಸಚಿವ ಆಂಟನಿ ಅವರನ್ನು ಭೇಟಿ ಮಾಡಿರುವ ಬಿಕ್ರಂ ಸಿಂಗ್ ಗಡಿ ಅತಿಕ್ರಮ ಪ್ರಕರಣದ ಪ್ರಸಕ್ತ ಬೆಳವಣಿಗೆಗಳನ್ನು ವಿವರಿಸಿದ್ದಾರೆ.
ಅಲ್ಲದೆ ವಿವಾದಿತ ಪ್ರದೇಶಕ್ಕೆ ಸೈನಿಕರನ್ನು ರವಾನಿಸುವಂತೆ ಸಲಹೆ ಕೂಡ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಏಪ್ರಿಲ್ 15ರಂದು ಚೀನಾದ ಯೋಧರು ಭಾರತ ಗಡಿ ಯನ್ನು ಆಕ್ರಮಿಸಿ ಅಕ್ರಮವಾಗಿ ಡೇರೆಗಳನ್ನು ನಿರ್ಮಿಸಿಕೊಂಡಿದ್ದರು. ಭಾರತ ಗಡಿ ಪ್ರದೇಶವಾದ ಲಡಾಕ್ನ ದೌಲತ್ ಬೇಗ್ ಓಲ್ಡಿ ಸೆಕ್ಟರ್(ಡಿಬಿಒ) ನಲ್ಲಿರುವ ಗಡಿ ನಿಯಂತ್ರಣ ರೇಖೆ (ಎಲ್ಒಸಿ)ಯ 10 ಕಿ.ಮೀ ವ್ಯಾಪ್ತಿಯಲ್ಲಿ ಚೀನಾ ಯೋಧರು ಗಡಿ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ಒಳನುಸುಳಿರುವುದು ಕಂಡು ಬಂದಿದೆ. ಹೀಗಾಗಿ ಘಟನಾ ಪ್ರದೇಶಕ್ಕೆ ಈಗಾಗಲೇ 5 ವಿಶೇಷ ಸೈನಿಕ ತಂಡಗಳನ್ನು ರವಾನಿಸಲಾಗಿದ್ದು, ಚೀನಿ ಯೋಧರ ಮೇಲೆ ಕಣ್ಗಾವಲಿಡುವಂತೆ ಸೂಚಿಸಲಾಗಿದೆ.