ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

12 ವರ್ಷಗಳಿಂದ ಕೋಮು ಗಲಭೆ ನಡೆದಿಲ್ಲ: ಮೋದಿ

ಕಳೆದ 12 ವರ್ಷಗಳಿಂದ ಗುಜರಾತ್ನಲ್ಲಿ ಯಾವುದೇ ಕೋಮು ಗಲಭೆಗಳು ನಡೆದಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದರು.

Srinivasa Murthy VN
Updated On : 26 Apr 2013, 6:55 am

ಹರಿದ್ವಾರ: ಕಳೆದ 12 ವರ್ಷಗಳಿಂದ ಗುಜರಾತ್ನಲ್ಲಿ ಯಾವುದೇ ಕೋಮು ಗಲಭೆಗಳು ನಡೆದಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದರು.

ಹರಿದ್ವಾರದಲ್ಲಿ ಯೋಗ ಗುರು ಬಾಬಾ ರಾಮ್ದೇವ್ ಅವರು ಸ್ಥಾಪಿಸಿರುವ ಆಚಾರ್ಯಕುಲಂ ವಿದ್ಯಾಪೀಠ ಶಾಲೆಯನ್ನು ಇಂದು ಉದ್ಘಾಟಿಸಿ ಮಾತನಾಡಿದ ಮೋದಿ, ಸರ್ಕಾರಗಳು ಮತ್ತು ರಾಜಕಾರಣಿಗಳು ಭಾರತ ದೇಶವನ್ನು ಕಟ್ಟಿಲ್ಲ. ಶ್ರೇಷ್ಟ ಸಂತರು, ಸ್ವಾಮೀಜಿಗಳು, ಋಷಿ ಮುನಿಗಳು ಮತ್ತು ಕಾಲಜ್ಞಾನಿಗಳ ಸಾಧನೆಯಿಂದಾಗಿ ಈ ದೇಶ ಹುಟ್ಟಿದೆ ಎಂದು ಹೇಳಿದರು.

'ಭಾರತ ಯುವಕರ ದೇಶ. ಇದನ್ನು ಸ್ವಾಮಿ ವಿವೇಕಾನಂದ ಬಹಳ ವರ್ಷಗಳ ಹಿಂದೆಯೇ ಹೇಳಿದ್ದರು. ಅಂತೆಯೇ ಇಡೀ ವಿಶ್ವವೇ 21ನೇ ಶತಮಾನ ಭಾರತದ್ದಾಗಿರುತ್ತದೆ ಎಂಬ ಅಂಶವನ್ನು ಒಪ್ಪಿಕೊಂಡಿದೆ. 21ನೇ ಶತಮಾನದಲ್ಲಿ ಭಾರತ ಅಭಿವೃದ್ಧಿ ಸಾಧಿಸಿದ ದೇಶವಾಗಲಿದೆ. ಈಗ ಪ್ರತಿಯೊಬ್ಬ ಭಾರತೀಯನೂ ಸ್ವಾಮಿ ವಿವೇಕಾನಂದ ಅವರು ಕಂಡಿದ್ದ ಕನಸನ್ನು ನನಸು ಮಾಡಬೇಕಿದೆಯಷ್ಟೇ' ಎಂದು ನುಡಿದರು.

'ಬಡವರಿಗಾಗಿ ಬಾಬಾ ರಾಮ್ದೇವ್ ಅವರು ಇಷ್ಟು ಜನೋಪಕಾರಿ ಕೆಲಸಗಳನ್ನು ಮಾಡುತ್ತಿರುವಾಗ, ಆಡಳಿತ ಮಾಡುತ್ತಿರುವವರು ಇನ್ನೆಷ್ಟು ಕೆಲಸ ಮಾಡಬೇಕು. ಇದನ್ನು ನಾನು ಕೇಳುತ್ತಿಲ್ಲ. ಆದರೆ ಜನ ಅಧಿಕಾರದಲ್ಲಿರುವವರಿಂದ ಉತ್ತರ ಬಯಸುತ್ತಿದ್ದಾರೆ. ಬಾಬಾ ರಾಮ್ದೇವ್ ಅವರು ಜನೋಪಕಾರಿ ಕೆಲಸ ಮಾಡಿದರೆ, ಕಾನೂನು ಬಾಹಿರ ಚುಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸುತ್ತೀರಿ. ಅವರು ಮಾಡುತ್ತಿರುವ ಕೆಲಸಗಳ ಹಿಂದೆ ಯಾವುದೇ ಕುತಂತ್ರಗಳಿಲ್ಲ. ಕೇವಲ ಸೇವಾ ಮನೋಭಾವದಿಂದ ಅವರು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ನಾನು ಮತ್ತು ಬಾಬಾ ರಾಮ್ದೇವ್ ಅವರು ಸೋದರರಿದ್ದಂತೆ. ಏಕೆಂದರೆ ಪ್ರತಿ ಬಾರಿಯೂ ನಾವಿಬ್ಬರೇ ಅಧಿಕಾರದಲ್ಲಿ ಕುಳಿತಿರುವ ದೆಹಲಿ ಮಂದಿಗೆ ಗುರಿಯಾಗಿರುತ್ತೇವೆ'.

'ರಾಜಕಾರಣಿಗಳ ದುರಾಡಳಿತದಿಂದಾಗಿ ನಾವು ನಮ್ಮ ಆತ್ಮಗೌರವವನ್ನೇ ಕಳೆದುಕೊಂಡಿದ್ದೇವೆ. ಅಭಿವೃದ್ಧಿಯಲ್ಲಿ ದೇಶಕ್ಕೆ ಗುಜರಾತ್ ಮಾದರಿಯಾಗಿದೆ. ಕಳೆದ 12 ವರ್ಷಗಳಿಂದ ಗುಜರಾತ್ನಲ್ಲಿ ಯಾವುದೇ ಕೋಮು ಗಲಭೆಗಳಾಗಿಲ್ಲ' ಎಂದು ನರೇಂದ್ರ ಮೋದಿ ಹೇಳಿದರು.

ಅಂತೆಯೇ ಸಮಾರಂಭದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬಾ ರಾಮ್ದೇವ್ ಅವರು, 'ನರೇಂದ್ರ ಮೋದಿ ಓರ್ವ ಪ್ರತಿಭಾವಂತ ನಾಯಕರಾಗಿದ್ದು, ಯುವಕರಿಗೆ ಸ್ಪೂರ್ತಿಯಾಗಬಲ್ಲ ಗುಣಗಳು ಅವರಲ್ಲಿವೆ. ತಮ್ಮ ಯೋಚನಾ ಲಹರಿಯಿಂದಲೇ ಅವರು ದೇಶದ ಅಭಿವೃದ್ಧಿಯ ಕನಸು ಕಾಣುತ್ತಿದ್ದಾರೆ. ಅವರು ಪ್ರಧಾನಿ ಅಭ್ಯರ್ಥಿಯಾಗುವುದಾದರೆ ಅವರಿಗೆ ನನ್ನ ಸಂಪೂರ್ಣ ಬೆಂಬಲವಿರುತ್ತದೆ' ಎಂದು ತಿಳಿಸಿದರು.

ಹರಿದ್ವಾರದಲ್ಲಿ ಬಾಬಾ ರಾಮ್ದೇವ್ ಅವರು ಸ್ಥಾಪಿಸಿರುವ 'ಆಚಾರ್ಯಕುಲಂ ವಿದ್ಯಾಪೀಠ'ವು ಆಯುರ್ವೇದ ಮತ್ತು ಆಧುನಿಕ ಮಾದರಿ ಶಾಲೆಯಾಗಿದ್ದು, ಪತಂಜಲಿ ಯೋಗ ಪೀಠದ ಅಧೀನದಲ್ಲಿ ಈ ಶಾಲೆ ಕಾರ್ಯ ನಿರ್ವಹಿಸಲಿದೆ. ಶಾಲೆಯ ಉದ್ಘಾಟನಾ ಸಮಾರಂಭಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕಿ ಉಮಾಭಾರತಿ, ಉಡುಪಿ ಶ್ರೀಕೃಷ್ಣ ಮಠದ ಪೇಜಾವರ ಶ್ರೀಗಳು, ಸ್ವಾಮಿ ಅವದೇಶಾನಂದ, ಸ್ವಾಮಿ ಆನಂದ ಮೂರ್ತಿ ಮಹಾರಾಜ ಮುಂತಾದ ದೇಶದ ಹಲವು ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement