ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಯಡ್ಡಿ ಬಿಜೆಪಿಗೆ ಮರಳಲಿ: ಉಮಾ ಭಾರತಿ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ಪಕ್ಷಕ್ಕೆ ವಾಪಸಾಗಬೇಕು ಎಂದು ಬಿಜೆಪಿ ಉಪಾಧ್ಯಕ್ಷೆ ಉಮಾಭಾರತಿ ಹೇಳಿದ್ದಾರೆ.

Srinivasa Murthy VN
Updated On : 26 Apr 2013, 7:39 am

ನವದೆಹಲಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ಪಕ್ಷಕ್ಕೆ ವಾಪಸಾಗಬೇಕು ಎಂದು ಬಿಜೆಪಿ ಉಪಾಧ್ಯಕ್ಷೆ ಉಮಾಭಾರತಿ ಹೇಳಿದ್ದಾರೆ.

ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ಕುರಿತು ತಮ್ಮ ಇಂಗಿತ ವ್ಯಕ್ತಪಡಿಸಿರುವ ಬಿಜೆಪಿಯ 'ಫೈರ್‌ಬ್ರಾಂಡ್‌' ಉಮಾಭಾರತಿ ಅವರು, ಯಡಿಯೂರಪ್ಪ ಓರ್ವ ಉತ್ತಮ ಸ್ವಯಂ ಸೇವಕರಾಗಿದ್ದು, ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ತಮಗೂ ಯಡಿಯೂರಪ್ಪ ಅವರಿಗೂ ಅವಿನಾಭಾವ ಸಂಬಂಧವಿದೆ. ಅವರು ನನ್ನ ಹಿರಿಯ ಸೋದರರಿದ್ದಂತೆ. ದೇಶ ಸಂಕಷ್ಟದಲ್ಲಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ದೇಶದ ಜನತೆ ಸಮಸ್ಯೆಗೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲ ಒಂದಾಗಿ ಶ್ರಮಿಸಬೇಕು. ಹೀಗಾಗಿ ಯಡಿಯೂರಪ್ಪ ಅವರು ಪಕ್ಷಕ್ಕೆ ವಾಪಸಾಗಬೇಕು' ಎಂದು ಉಮಾ ಭಾರತಿ ಹೇಳಿದರು.

'ಯಡ್ಡಿ ಪಕ್ಷ ತೊರೆಯಲು ವ್ಯಕ್ತಿಗತ ಅಹಂ ಕಾರಣ. ನಾವು (ಬಿಜೆಪಿ) ವ್ಯಕ್ತಿಗಿಂತ ದೇಶ ಮುಖ್ಯ ಎಂಬ ಧ್ಯೇಯವನ್ನು ನಂಬಿದ್ದೇವೆ. ವ್ಯಕ್ತಿಗತ ಅಹಂ ಎರಡೂ ಕಡೆ ಮನೆ ಮಾಡಿ ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ದೂರ ಮಾಡಿದೆ. ಇಂತಹುದೇ ಕಾರಣಗಳಿಂದಾಗಿ ನಾನು ಪಕ್ಷದಿಂದ 5 ವರ್ಷ ದೂರವಿದ್ದೆ. ಬಿಜೆಪಿ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಬೆಲೆ ನೀಡುವ ಪಕ್ಷ. ಇಲ್ಲಿ ವ್ಯಕ್ತಿಗಿಂತ ದೇಶವೇ ಮುಖ್ಯ. ಬಿಜೆಪಿಯಿಂದ ದೂರವಾಗಿರುವ ಎಲ್ಲ ನಾಯಕರುಗಳು ಇದನ್ನು ಅರಿತುಕೊಂಡು ಶೀಘ್ರವೇ ಮರಳಿ ಪಕ್ಷಕ್ಕೆ ವಾಪಸಾಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವ ನಿಟ್ಟಿನಲ್ಲಿ ನೀವು ಜವಾಬ್ದಾರಿ ವಹಿಸಿಕೊಳ್ಳುವಿರಾ..? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಉಮಾಭಾರತಿ, ನನಗಿಂತಲೂ ಉತ್ತಮ ನಾಯಕರು ಮತ್ತು ಹಿರಿಯರು ಪಕ್ಷದಲ್ಲಿದ್ದಾರೆ. ಕರ್ನಾಟಕ ಬಿಜೆಪಿಯ ನೇತೃತ್ವ ವಹಿಸಿಕೊಂಡಿರುವ ನಾಯಕರು ಈ ಬಗ್ಗೆ ನಿರ್ಧಾರ ಕೈಗೊಳ್ಳಲ್ಲಿದ್ದಾರೆ ಎಂದು ಹೇಳಿದರು.

ಅಂತೆಯೇ ಯಡಿಯೂರಪ್ಪ ಸಹಿತ ಮತ್ತು ರಹಿತ ಪ್ರಣಾಳಿಕೆಗಳಲ್ಲಿ ಯಾವುದು ಉತ್ತಮ ಪ್ರಣಾಳಿಕೆಯಾಗಿದೆ ಎಂಬ ಪ್ರಶ್ನೆಗೆ ಅವರು, 'ಈ ಬಗ್ಗೆ ಉತ್ತರಿಸುವುದು ಕಷ್ಟ. ಆದರೆ ಬಿಜೆಪಿ ಸೈದ್ಧಾಂತಿಕ ಪಕ್ಷವಾಗಿದ್ದು, ಸಾಮಾನ್ಯವಾಗಿಯೇ ಜನಪರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ' ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement