ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದಲಿತಳಾದ್ದರಿಂದ ನನ್ನ ತಪಾಸಣೆ ಮಾಡಿದರು: ಮಾಯಾವತಿ

ನಾನು ದಲಿತಳಾದ ಕಾರಣ ಅಧಿಕಾರಿಗಳು ನನ್ನ ಹೆಲಿಕಾಪ್ಟರ್ ತಪಾಸಣೆ ಮಾಡಿದರು ಎಂದು ಬಿಎಸ್‌ಪಿ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.

Srinivasa Murthy VN
Updated On : 27 Apr 2013, 6:08 am

ಗುಲ್ಬರ್ಗಾ: ನಾನು ದಲಿತಳಾದ ಕಾರಣ ಅಧಿಕಾರಿಗಳು ನನ್ನ ಹೆಲಿಕಾಪ್ಟರ್ ತಪಾಸಣೆ ಮಾಡಿದರು ಎಂದು ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.

ಇಂದು ಗುಲ್ಬರ್ಗಾದ ಜೇವರ್ಗಿಯಲ್ಲಿ ಏರ್ಪಡಿಸಿದ್ದ ಬಿಎಸ್‌ಪಿ ಪ್ರಚಾರ ಸಭೆಗೆ ಆಗಮಿಸಿದ್ದ ಮಾಯಾವತಿ ಅವರು, 'ನಾನು ದಲಿತಳಾದ ಕಾರಣ ಚುನಾವಣಾಧಿಕಾರಿಗಳು ನನ್ನ ಹೆಲಿಕಾಪ್ಟರ್ ಅನ್ನು ತಪಾಸಣೆಗೊಳಪಡಿಸಿದ್ದಾರೆ. ಆದರೆ ಈ ಹಿಂದೆ ನನ್ನಂತೆಯೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು. ಅವರನ್ನು ಈ ಅಧಿಕಾರಿಗಳು ತಪಾಸಣೆ ಮಾಡಲಿಲ್ಲ. ದಲಿತ ಮಹಿಳೆಯೊಬ್ಬಳು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದರೆ ಇವರಿಗೆ ಸಹಿಲಾಗುವುದಿಲ್ಲ. ಹೀಗಾಗಿಯೇ ಅವರು ವಿನಾಃಕಾರಣ ತೊಂದರೆ ಮಾಡುತ್ತಿದ್ದಾರೆ' ಎಂದು ಹೇಳಿದರು.

ಜೇವರ್ಗಿಯಲ್ಲಿ ಏರ್ಪಡಿಸಿದ್ದ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು. ವಾಡಿಕೆಯಂತೆಯೇ ಕರ್ನಾಟಕ ಚುನಾವಣಾಧಿಕಾರಿಗಳು ಮಾಯಾವತಿ ಅವರು ಆಗಮಿಸಿದ್ದ ಹೆಲಿಕಾಪ್ಟರ್ ಅನ್ನು ತಪಾಸಣೆಗೊಳಪಡಿಸಿ, ಮಾಯಾವತಿ ಅವರ ಕೈಚೀಲದಲ್ಲಿದ್ದ ಸುಮಾರು 1 ಲಕ್ಷ ರು.ಗಳನ್ನು ವಶಪಡಿಸಿಕೊಳ್ಳಲು ಮುಂದಾದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಯಾವತಿ ಅವರು, ಚುನಾವಣಾಧಿಕಾರಿಗಳಿಂದ ಚೀಲವನ್ನು ಕಿತ್ತುಕೊಂಡು, ವೇದಿಕೆಯತ್ತ ಧಾವಿಸಿ ಭಾಷಣ ಮಾಡಿದರು.

ಮಾಯಾವತಿ ಅವರ ಭಾಷಣದ ನಂತರ ವೇದಿಕೆಯ ಬಳಿ ಆಗಮಿಸಿದ ಅಧಿಕಾರಿಗಳು ಮತ್ತೆ ಅವರ ಚೀಲದ ತಪಾಸಣೆ ಮಾಡಿದಾಗ, ಅದರಲ್ಲಿದ್ದ ಹಣದ ಪೈಕಿ 50 ಸಾವಿರ ರು.ಗಳು ನಾಪತ್ತೆಯಾಗಿತ್ತು. ಈ ಬಗ್ಗೆ ಮಾಯಾವತಿ ಅವರನ್ನು ವಿಚಾರಿಸಿದಾಗ, 'ಚೀಲದಲ್ಲಿದ್ದ ಹಣದ ಪೈಕಿ 50 ಸಾವಿರ ರು.ಗಳು ಮಾತ್ರ ನನ್ನದಾಗಿತ್ತು. ಉಳಿದ 50 ಸಾವಿರ ಹಣ ರಾಜ್ಯಾಧ್ಯಕ್ಷರದ್ದು. ಆ ಹಣವನ್ನು ಅವರು ತೆಗೆದುಕೊಂಡರು. ಬಿಎಸ್‌ಪಿ ಪಕ್ಷದ ಅಧ್ಯಕ್ಷೆಯಾಗಿರುವ ನನ್ನ ಬಳಿ 50 ಸಾವಿರ ರುಪಾಯಿಗಳಿರುವುದು ವಿಶೇಷವೇನಲ್ಲ' ಎಂದು ಹೇಳಿದರು.

ಒಟ್ಟಾರೆ ಬಿಎಸ್‌ಪಿ ಅಧ್ಯಕ್ಷೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರಿಗೆ ಕರ್ನಾಟಕ ಚುನಾವಣಾಧಿಕಾರಿಗಳ ಪ್ರಾಮಾಣಿಕ ಕರ್ತವ್ಯ ನಿರ್ವಹಣೆ ಇರುಸು ಮುರುಸು ಉಂಟುಮಾಡಿದೆ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರಿಗೆ ಚುನಾವಣಾ ಸಂದರ್ಭದಲ್ಲಿ ಅಧಿಕಾರಿಗಳು ಏಕೆ ತಪಾಸಣೆ ಮಾಡುತ್ತಾರೆ ಎಂಬ ಕನಿಷ್ಟ ಜ್ಞಾನವೂ ಇಲ್ಲದೆ, ದಲಿತಳಾದ್ದರಿಂದ ತಪಾಸಣೆ ಮಾಡಿದರು ಎಂದು ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸಮಂಜಸ...?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement