ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಿಂದಗಿ ಜೆಡಿಯು ಅಭ್ಯರ್ಥಿ ನಿಧನ: ಚುನಾವಣೆ ಮುಂದೂಡಿಕೆ ಇಲ್ಲ

ಸಿಂದಗಿ ಕ್ಷೇತ್ರದಲ್ಲಿ ಚುನಾವಣೆಯನ್ನು ಮುಂದೂಡಿಕೆ ಮಾಡುವುದಿಲ್ಲ ಎಂದು ರಾಜ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.

Srinivasa Murthy VN
Updated On : 27 Apr 2013, 8:02 am

ಬೆಂಗಳೂರು: ಸಿಂದಗಿ ಕ್ಷೇತ್ರದಲ್ಲಿ ಚುನಾವಣೆಯನ್ನು ಮುಂದೂಡಿಕೆ ಮಾಡುವುದಿಲ್ಲ ಎಂದು ರಾಜ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.

ಸಿಂದಗಿ ಕ್ಷೇತ್ರದ ಜೆಡಿಯು ಅಭ್ಯರ್ಥಿ ದ್ಯಾವಪ್ಪಗೌಡ ಪಾಟೀಲ್ ಅವರು ನಿಧನರಾದ ಹಿನ್ನಲೆಯಲ್ಲಿ ಚುನಾವಣೆ ಮುಂದೂಡಬಹುದು ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಅನಿಲ್ ಕುಮಾರ್ ಝಾ ಅವರು, ಚುನಾವಣೆ ಮುಂದೂಡಿಕೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕ ರಾಜ್ಯದಲ್ಲಿ ಜೆಡಿಯು ಮಾನ್ಯತೆ ಪಡೆದ ಪಕ್ಷವಲ್ಲ. ಹೀಗಾಗಿ ಜೆಡಿಯು ಅಭ್ಯರ್ಥಿ ದ್ಯಾವಪ್ಪಗೌಡ ಪಾಟೀಲ್ ಅವರ ನಿಧನದಿಂದಾಗಿ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದ್ಯಾವಪ್ಪಗೌಡರ ನಿಧನ ವಿಚಾರ ತಮಗೂ ತಿಳಿದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದೇವೆ ಎಂದು ಅನಿಲ್ ಕುಮಾರ್ ಝಾ ಹೇಳಿದರು.

ಸಿಂದಗಿ ಕ್ಷೇತ್ರದ ಜೆಡಿಯು ಅಭ್ಯರ್ಥಿಯಾಗಿರುವ ದ್ಯಾವಪ್ಪಗೌಡ ಪಾಟೀಲ್ ಅವರು ಇಂದು ಪ್ರಚಾರದ ವೇಳೆಯಲ್ಲಿ ಹೃದಯಾಘಾತಕ್ಕೀಡಾಗಿದ್ದರು. ಕೂಡಲೇ ಅವರನ್ನು ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರು. ದ್ಯಾವಪ್ಪಗೌಡ ಅವರ ನಿಧನದಿಂದಾಗಿ ಚುನಾವಣೆ ಮುಂದೂಡಬಹುದು ಎಂದು ಹೇಳಲಾಗುತಿತ್ತು.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು

ರಾಜ್ಯದಲ್ಲಿ ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಕ್ಯಾರೆ ಅನ್ನದ ಅಭ್ಯರ್ಥಿಗಳು ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ರಾಜ್ಯದಲ್ಲಿ ಸುಮಾರು 1619 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು 435 ಪ್ರಕರಣಗಳಿಗೆ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

1619 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಚುನಾವಣಾ ಅಧಿಕಾರಿಗಳು, ಒಟ್ಟು 12,20 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಮತದಾರರಿಗೆ ಹಂಚಲು ತಂದಿದ್ದ ಸೀರೆ-ಬ್ಲೌಸ್, ಅಂಗಿ ಪಂಚೆ, ಮಧ್ಯದ ಬಾಟಲಿಗಳು ಸೇರಿದಂತೆ ಒಟ್ಟು 4, 71 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅನಿಲ್‌ಕುಮಾರ್ ಝಾ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement