ಬಿಜೆಪಿ ಚುನಾವಣಾ ಪ್ರಚಾರ 'ಕೈ' ವಿರುದ್ದ ಹರಿಹಾಯ್ದ: ಮೋದಿ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.
ಬೆಂಗಳೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.
ಬವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿರುವ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ದ ಹರಿಹಾಯ್ದರು. ಕಾಂಗ್ರೆಸ್ ಇಲ್ಲಿಯವರೆಗೂ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನೇ ಘೋಷಿಸಿಲ್ಲ. ರಾಜ್ಯದ ಜನತೆ ಕೇಳುತ್ತಿದ್ದಾರೆ. 'ಕೈ ತೋರಿಸಬೇಡಿ ಮುಖ್ಯಮಂತ್ರಿ ಅಭ್ಯರ್ಥಿಯ ಮುಖಾನು ತೊರಿಸಿ' ಎಂದು. ಹೀಗಾಗಿ ಕಾಂಗ್ರೆಸ್ ಮೊದಲು ಸಿಎಂ ಅಭ್ಯರ್ಥಿ ಘೋಷಿಸಿ ನಂತರ ಚುನಾವಣಾ ಕಣಕ್ಕೆ ಇಳಿಯಲಿ ಎಂದು ಸವಾಲು ಹಾಕಿದ್ದಾರೆ.
ಕೋಮುವಾದ ಬಿತ್ತೋದು ಕಾಂಗ್ರೆಸ್ನ ಸಂಪ್ರದಾಯವೇ ಆಗಿದೆ. ಇದರಿಂದಾಗಿ ಅಭಿವೃದ್ದಿ ಸಾಧಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರದಲ್ಲೂ ಕಾಂಗ್ರೆಸ್ದು ಎತ್ತಿದ ಕೈ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಆದರೆ ಏನು ಪ್ರಯೋಜನ ಇಂದು ದೆಹಲಿ ಸುರಕ್ಷಿತವಾಗಿದೆ? ದೆಹಲಿ ಅಂತಹ ಪುಟ್ಟ ರಾಜ್ಯದಲ್ಲಿ ಸುರಕ್ಷತೆ ಕಾಪಾಡಲು ಸಾಧ್ಯವಾಗದ ಕಾಂಗ್ರೆಸ್ಗೆ ಕರ್ನಾಟಕದಂತಹ ದೊಡ್ಡ ರಾಜ್ಯಕ್ಕೆ ಸುರಕ್ಷತೆ ಒದಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಜನರ ಭಾವನೆಗಳಿಗೆ ನಾನು ಚಿರಋಣಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ 5 ವರ್ಷಗಳ ಅವದಿಯನ್ನು ಪೂರೈಸಿದ್ದು, ಉತ್ತಮ ಅಧಿಕಾರ ನೀಡುವಲ್ಲಿ ಸಫಲವಾಗಿದೆ. ನನಗೆ ನಂಬಿಕೆ ಇದೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯು ಜನರ ಆಶೀರ್ವಾದದಿಂದಾಗಿ ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಭರವಸೆ ಇದೆ ಎಂದರು.
ಬಹಿರಂಗ ಸಭೆಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತ್ಕುಮಾರ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದರು. ಅಲ್ಲದೆ ಮೋದಿ ನಾಯಕತ್ವವನ್ನು ಕೊಂಡಾಡಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಸೇರಿದಂತೆ ಬಿಜೆಪಿ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದಾರೆ.