ಕಾಪ್ಟರ್ ಖರೀದಿ; ಯಾವುದೇ ನಿರ್ಣಯ ಇಲ್ಲ: ಆಂಟನಿ
ಹೆಲಿಕಾಪ್ಚರ್ ಖರೀದಿ ಒಪ್ಪಂದವನ್ನು ರದ್ದುಪಡಿಸುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸಚಿವ ಎಕೆ ಆಂಟನಿ ಹೇಳಿದ್ದಾರೆ.
ನವದೆಹಲಿ: ಬಹುಕೋಟಿ ವಿವಿಐಪಿ ಹೆಲಿಕಾಪ್ಚರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಅಗಸ್ಟಾವೆಸ್ಟ್ ಲ್ಯಾಂಡ್ ನಡುವಿನ ಒಪ್ಪಂದವನ್ನು ರದ್ದುಪಡಿಸುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ಎಕೆ ಆಂಟನಿ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಮಾತನಾಡಿದ ಆಂಟನಿ, ಹೆಲಿಕಾಪ್ಟರ್ ಖರೀದಿ ಬಿಡ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಈ ಹಂತದಲ್ಲಿ ಒಪ್ಪಂದ ಕುರಿತು ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಹಗರಣ ಕುರಿತು ಸಿಬಿಐ ತನಿಖೆ ನಡೆಸುತ್ತಿದ್ದು, ತನಿಖೆ ಪೂರ್ಣಗೊಂಡಿಲ್ಲ. ಅಲ್ಲದೆ ನೌಕಾಪಡೆಯ ಅಧಿಕಾರಿಗಳೂ ಸಹ ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಆಂಟನಿ ಸಭೆಗೆ ತಿಳಿಸಿದರು.
ಇಂದು ಅಧಿವೇಶನ ಆರಂಭವಾಗುತ್ತಿದ್ದಂತೆ ಹೆಲಿಕಾಪ್ಟರ್ ಖರೀದಿ ಹಗರಣವನ್ನು ಪ್ರಸ್ತಾಪಿಸಿದ ವಿಪಕ್ಷ ನಾಯಕರು, ಹಗರಣದ ತನಿಖೆಯ ಸ್ಥಿತಿಗತಿ ತಿಳಿಸುವಂತೆ ಒತ್ತಾಯಿಸಿದರು. ವಿಪಕ್ಷ ನಾಯಕರ ಮನವಿಯನ್ನು ಪುರಸ್ಕರಿಸಿದ ಸ್ಪೀಕರ್ ಅವರು ಈ ಬಗ್ಗೆ ಮಾಹಿತಿ ನೀಡುವಂತೆ ಸಚಿವ ಆಂಟನಿ ಅವರಿಗೆ ಸೂಚಿಸಿದ್ದರು.
ವಿವಿಐಪಿಗಳು ಪ್ರಯಾಣಿಸಲು 12 ಹೆಲಿಕಾಪ್ಟರ್ಗಳನ್ನು ಖರೀದಿಸಲು ಮುಂದಾಗಿದ್ದ ಭಾರತ, ಇದಕ್ಕಾಗಿ ಟೆಂಡರ್ ಕರೆದಿತ್ತು. ಅಮೆರಿಕಾ, ಇಟಲಿ ಸೇರಿದಂತೆ ವಿಶ್ವದ ಅನೇಕ ಪ್ರಮುಖ ವಿಮಾನ ತಯಾರಿಕಾ ಸಂಸ್ಥೆಗಳು ಟೆಂಡರ್ನಲ್ಲಿ ಪಾಲ್ಗೊಂಡಿದ್ದವು. ತೀವ್ರ ಪೈಪೋಟಿಯಿಂದ ಕೂಡಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿ ಟೆಂಡರ್ ಪಡೆಯಲು ಇಟಲಿಯ ಅಗಸ್ಟವೆಸ್ಟ್ಲ್ಯಾಂಡ್ನ ಸಿಇಒ ಆಗಿದ್ದ ಗಿಸೆಪ್ಪಿ ಓರ್ಸಿ ಅವರು ದಲ್ಲಾಳಿಗಳೊಂದಿಗೆ ಡೀಲ್ ಕುದುರಿಸಿದ್ದರು.
ಹಗರಣವನ್ನು ತನಿಖೆ ನಡೆಸುತ್ತಿರುವ ಇಟಲಿಯ ತನಿಖಾಧಿಕಾರಿಗಳು, ಇಟಲಿಯ ಅಗಸ್ಟ ವೆಸ್ಟ್ಲ್ಯಾಂಡ್ ಸಿಇಒ ಬ್ರುನೋ ಸ್ಪ್ಯಾಂಗೊಲೀನಿ ಮತ್ತು ಫಿನ್ ಮಕಾನಿಕಾ ಸಿಇಒ ಗಿಸೆಪ್ಪಿ ಓರ್ಸಿ ಅವರನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.