ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪೇಶಾವರದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, 6 ಸಾವು

ಪಾಕಿಸ್ತಾನದ ಪೇಶಾವರದವಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಆರು ಮಂದಿ ಸಾವು, 35ಕ್ಕೂ ಹೆಚ್ಚು ಮಂದಿಗೆ ಗಾಯ.

Srinivasa Murthy VN
Updated On : 29 Apr 2013, 3:22 am

ಪೇಶಾವರ: ಪಾಕಿಸ್ತಾನದ ಪೇಶಾವರದವಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಟ ಆರು ಮಂದಿ ಮೃತಪಟ್ಟ್ಟಿದ್ದು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇಂದು ಮಧ್ಯಾಹ್ನ ಪೇಶಾವರದ ವಿಶ್ವವಿದ್ಯಾಲಯ ಆವರಣದ ರಸ್ತೆಯಲ್ಲಿ ಈ ಬಾಂಬ್ ಸ್ಫೋಟಗೊಂಡಿದ್ದು, ಪೊಲೀಸ್ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಮ್ಮ ಬೈಕಿನ ಪೆಟ್ರೋಲ್ ಟ್ಯಾಂಕ್ ಕೆಳಗೆ ಬಾಂಬ್ ಇರಿಸಿ, ವಿಶ್ವವಿದ್ಯಾಲಯದ ರಸ್ತೆಯಲ್ಲಿ ಚಲಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳ ವಾಹನದ ಬಳಿ ಬಂದು ಸ್ಫೋಟಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಸ್ಫೋಟ ಸ್ಥಳದಲ್ಲಿ ದಾಳಿಕೋರರ ಮೃತದೇಹ ಚೆಲ್ಲಾಪಿಲ್ಲಿಯಾಗಿದ್ದು, ದಾಳಿಯಿಂದಾಗಿ ಇಬ್ಬರು ಪೊಲೀಸ್ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಸೇರಿದಂತೆ ಒಟ್ಟು ಆರು ಮಂದಿ ಬಲಿಯಾಗಿದ್ದು, 35ಕ್ಕೂ ಹೆಚ್ಚು ಮಂದಿಗೆ ಗಂಭೀರಗಾಯಗಳಾಗಿವೆ. ಮೇಲ್ನೋಟಕ್ಕೆ ಇದು ಆತ್ಮಹತ್ಯಾ ದಾಳಿಯಾಗಿ ಕಂಡುಬದಂರೂ, ಬೈಕಿನಲ್ಲಿ ಬಂದ ಇಬ್ಬರು ಯುವಕರು ತಾವೇ ಸ್ಫೋಟಿಸಿಕೊಂಡರೇ? ಅಥವಾ ಬೇರೆ ಯಾರಾದರೂ ಬೈಕಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದರೇ? ಎಂಬ ಅಂಶದ ಕುರಿತು ಅನುಮಾನಗಳು ಮೂಡುತ್ತಿವೆ' ಎಂದು ಸ್ಥಳೀಯ ಪೊಲೀಸ್ ವಕ್ತಾರ ಜಲಾಲುದ್ದೀನ್ ಖಾನ್ ಹೇಳಿದ್ದಾರೆ.

ಬಾಂಬ್ ಸ್ಫೋಟದಲ್ಲಿ ಒಂದು ಸಾರ್ವಜನಿಕ ಬಸ್ ಕೂಡ ನಜ್ಜುಗುಜ್ಜಾಗಿದ್ದು, ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಮತ್ತು ತುರ್ತು ವೈದ್ಯಕೀಯ ವಾಹನಗಳು ಆಗಮಿಸಿವೆ. ಇದುವರೆಗೂ ಯಾವುದೇ ಉಗ್ರ ಸಂಘಟನೆ ಬಾಂಬ್ ದಾಳಿಯ ನೇತೃತ್ವ ವಹಿಸಿಕೊಂಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement