ಬೊಮ್ಮಾಯಿಗೆ ಸ್ಥಾನ ನೀಡಿ ಬೆಳೆಸಿದ್ದೇ ತಪ್ಪಾಯಿತು: ಬಿಎಸ್‌ವೈ
ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಸ್ಥಾನ ನೀಡಿ ತಪ್ಪು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಹಾವೇರಿ: ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಸ್ಥಾನ ನೀಡಿ ತಪ್ಪು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಕೆಜೆಪಿ ಅಭ್ಯರ್ಥಿ ಬಾಪುಗೌಡರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಸಚಿವ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. 'ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೊಮ್ಮಾಯಿ ಅವರಿಗೆ ಹಲವರ ವಿರೋಧದ ನಡುವೆಯೂ ಪ್ರಮುಖ ಸ್ಥಾನ ನೀಡಿದ್ದೆ. ಆದರೆ ಅವರು ನನ್ನ ಬೆನ್ನಿಗೆ ಚೂರಿ ಹಾಕಿ ಮೋಸ ಮಾಡಿದ್ದಾರೆ. ಪ್ರಮುಖ ಖಾತೆಯನ್ನು ಹೊಂದಿದ್ದ ಅವರು ಸಚಿವರಾದ ನಂತರ ಪ್ರಮುಖ ನಾಯಕರಾಗಿ ಬೆಳೆದರು. ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ಕ್ಷಣದವರೆಗೂ ಕೆಜೆಪಿ ಸೇರುವುದಾಗಿ ಹೇಳಿದ್ದರು. ಆದರೆ ಅವರು ನನಗೆ ಮೊಸಮಾಡಿದರು. ಬೆನ್ನಿಗೆ ಚೂರಿ ಹಾಕಿದ ಅವರಿಗೆ ಜನತೆ ಸರಿಯಾದ ಪಾಠ ಕಲಿಸಬೇಕು' ಎಂದು ಯಡಿಯೂರಪ್ಪ ಹೇಳಿದರು.
ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ನಾಯಕರ ನಡುವಿನ ವಾಕ್ಸಮರ ತಾರಕ್ಕೇರುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ವಿರುದ್ಧ ನೀಡಿರುವ ಹೇಳಿಕೆಗಳಿಗೆ ಸಚಿವ ಬೊಮ್ಮಾಯಿ ಹೇಗೆ ತಿರುಗೇಟು ನೀಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.