ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗಡಿ ಅತಿಕ್ರಮಣ: ಕ್ಯಾಬಿನೆಟ್‌ಗೆ ಮಾಹಿತಿ ನೀಡಿದ ಸೇನಾ ಮುಖ್ಯಸ್ಥ

ಗಡಿ ಅತಿಕ್ರಮಣ ಕುರಿತಂತೆ ಬುಧವಾರ ಭಾರತೀಯ ಭೂಸೇನಾ ಮುಖ್ಯಸ್ಥ ಬಿಕ್ರಂ ಸಿಂಗ್ ಅವರು ಕೇಂದ್ರ ಸಚಿವ ಸಂಪುಟಕ್ಕೆ...

Srinivasa Murthy VN
Updated On : 1 May 2013, 6:08 am

ನವದೆಹಲಿ: ಚೀನಾ ಯೋಧರ ಗಡಿ ಅತಿಕ್ರಮಣ ಕುರಿತಂತೆ ಬುಧವಾರ ಭಾರತೀಯ ಭೂಸೇನಾ ಮುಖ್ಯಸ್ಥ ಬಿಕ್ರಂ ಸಿಂಗ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ಮಾಹಿತಿ ನೀಡಿದ್ದಾರೆ.

ನವದೆಹಲಿಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಿದ ಜ.ಬಿಕ್ರಂಸಿಂಗ್ ಅವರು, ಗಡಿ ಅತಿಕ್ರಮಣ ಕುರಿತಂತೆ ಸೇನೆಯ ಮುಂದಿರುವ ಆಯ್ಕೆಗಳು ಮತ್ತು ಉಭಯ ದೇಶಗಳ ಧ್ವಜ ಸಭೆಯ ಸಾರಾಂಶಗಳನ್ನು ವಿವರಿಸಿದ್ದಾರೆ.

ಚೀನಾ ಯೋಧರ ಅತಿಕ್ರಮಣ ಕುರಿತಂತೆ ವಿಪಕ್ಷಗಳಿಂದ ತೀವ್ರ ವಾಗ್ದಾಳಿ ಎದುರಿಸುತ್ತಿರುವ ಯುಪಿಎ ಸರ್ಕಾರ, ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಹೀಗಾಗಿಯೇ ಭೂ ಸೇನಾ ಮುಖ್ಯಸ್ಥ ಬಿಕ್ರಂ ಸಿಂಗ್ ಅವರೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದಿದೆ. ಚೀನಾ ಯೋಧರನ್ನು ಮರಳಿಸಲು ಭಾರತದ ಮುಂದಿರುವ ಆಯ್ಕೆಗಳ ಕುರಿತು ಜ.ಬಿಕ್ರಂ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.

ಮೂಲಗಳ ಪ್ರಕಾರ ಗಡಿಯಲ್ಲಿ ನಿರೀಕ್ಷೆಗಿಂತ ವೇಗವಾಗಿ ಚಟುವಟಿಕೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಚೀನಾ ಯೋಧರು ಭಾರತದ ಗಡಿ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳ ದಾಸ್ತಾನುಗಳನ್ನು ಶೇಖರಿಸುತ್ತಿದ್ದು, ದಾಳಿಯಿಂದ ತಪ್ಪಿಸಿಕೊಳ್ಳಲು ನೆರವಾಗುವ ಗುಹಾಂತ ಮಾರ್ಗಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಭಾರತೀಯ ಗಡಿ ಪ್ರದೇಶವಾದ ಲಡಾಕ್‌ನ ದೌಲತ್ ಬೇಗ್ ಓಲ್ಡಿ ಸೆಕ್ಟರ್‌ನಲ್ಲಿ ಚೀನಾ ಯೋಧರು ಅಕ್ರಮವಾಗಿ ಬಿಡಾರ ಹೂಡಿದ್ದು, ಅವರನ್ನು ಹಿಂಪಡೆಯುವಂತೆ ಚೀನಾದೊಂದಿಗೆ ಭಾರತ ನಡೆಸುತ್ತಿರುವ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿವೆ. ಸತತ ಮೂರು ಭಾರಿ ನಡೆದ ಸೇನಾ ಬ್ರಿಗೇಡಿಯರ್‌ಗಳ ಧ್ವಜ ಸಭೆಯೂ ಯಾವುದೇ ತಾರ್ಕಿಕ ಒಪ್ಪಂದಕ್ಕೆ ಬರುವಲ್ಲಿ ವಿಫಲವಾಗಿತ್ತು.

ಚೀನಾ ಗಡಿ ಪ್ರದೇಶದಲ್ಲಿಯೇ ಯೋಧರು ಬಿಡಾರ ಹೂಡಿದ್ದಾರೆ ಎಂದು ಮೊಂಡುವಾದ ಮುಂದಿಡುತ್ತಿರುವ ಚೀನಾ, ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಒಪ್ಪುತ್ತಿಲ್ಲ. ಹೀಗಾಗಿ ಗಡಿ ಪ್ರದೇಶ ಲಡಾಕ್‌ನಲ್ಲಿ ಪರಿಸ್ಥಿತಿ ಪ್ರಕ್ಷುಬ್ದಗೊಂಡಿದೆ. ಈ ನಡುವೆ ಚೀನಾ ಪ್ರವಾಸವನ್ನು ಮೊಟಕುಗೊಳಿಸಿ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ರಾಜನಾಥ್ ಸಿಂಗ್ ಅವರ ಮನವಿಯನ್ನು ತಿರಸ್ಕರಿಸಿರುವ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಅವರು, ಈ ಬಗ್ಗೆ ಕೇಂದ್ರಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement