ಆರ್ಬಿಐ ಗವರ್ನರ್ ಆಗಿ ರಾಜನ್ ನೇಮಕ: ಚೇತರಿಕೆ ಕಂಡ ರುಪಾಯಿ ಮೌಲ್ಯ
ರಿಜರ್ವ್ ಬ್ಯಾಂಕಿನ ಗವರ್ನರ್ ಆಗಿ ರಘುರಾಮ್ ರಾಜನ್ ಅವರ ನೇಮಕವಾಗುತ್ತಿದ್ದಂತೆಯೇ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದ್ದ ರುಪಾಯಿ ಮೌಲ್ಯ ಚೇತರಿಕೆ ಕಂಡಿದೆ.
ನವದೆಹಲಿ: ಭಾರತೀಯ ರಿಜರ್ವ್ ಬ್ಯಾಂಕಿನ ಗವರ್ನರ್ ಆಗಿ ರಘುರಾಮ್ ರಾಜನ್ ಅವರ ನೇಮಕ ವಿಚಾರ ಹೊರಬೀಳುತ್ತಿದ್ದಂತೆಯೇ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದ್ದ ರುಪಾಯಿ ಮೌಲ್ಯ ಚೇತರಿಕೆ ಕಂಡಿದೆ.
ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಆರ್ಬಿಐ ಹಾಲಿ ಗವರ್ನರ್ ಡಿ.ಸುಬ್ಬಾರಾವ್ ಅವರ ಅಧಿಕಾರಾವಧಿ ಪೂರ್ಣಗೊಳ್ಳಲ್ಲಿದ್ದು, ಅವರ ಸ್ಥಾನಕ್ಕೆ ಕೇಂದ್ರ ಸರ್ಕಾರ ಹಿರಿಯ ಅರ್ಥಿಕ ಸಲಹೆಗಾರ ರಘುರಾಮ್ ರಾಜನ್ ಅವರನ್ನು ನೇಮಿಸಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ರಘುರಾಮ್ ರಾಜನ್ ಅವರನ್ನು ನೇಮಕ ಮಾಡಿದ್ದು, ಸೆಪ್ಟೆಂಬರ್ 4ರಂದು ಅವರು ಅಧಿಕಾರ ವಹಿಸಿಕೊಳ್ಳಲ್ಲಿದ್ದಾರೆ. ಅಲ್ಲದೆ ಅಂದೇ ಹಾಲಿ ಗವರ್ನರ್ ಡಿ.ಸುಬ್ಬಾರಾವ್ ಅವರ ಅಧಿಕಾರಾವಧಿ ಕೂಡ ಕೊನೆಗೊಳ್ಳಲಿದೆ.
ಈ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದ್ದ ರುಪಾಯಿ ಮೌಲ್ಯ ನಾಟಕೀಯವಾಗಿ ಚೇತರಿಸಿಕೊಂಡಿದೆ. ನಿನ್ನೆಯಷ್ಟೇ ಡಾಲರ್ ಎದುರು ಸರ್ವಕಾಲಿಕ ಕುಸಿತಗೊಂಡಿದ್ದ ರುಪಾಯಿ ಮೌಲ್ಯ ಇಂದು ಚೇತರಿಸಿಕೊಂಡಿದ್ದು, ಪ್ರತೀ ಡಾಲರ್ ಬೆಲೆ ಇದೀಗ 60.77 ರುಪಾಯಿಗಳಾಗಿವೆ.