ಕನ್ನಡ ಚಿತ್ರಗಳಿಗೆ ಅನ್ಯ ಭಾಷಾ ಟೈಟಲ್: ಮುಖ್ಯಮಂತ್ರಿ ಚಂದ್ರು ಅಸಮಾಧಾನ
ಕನ್ನಡ ಭಾಷಾ ಚಿತ್ರಗಳಿಗೆ ಅನ್ಯ ಭಾಷಾ ಶೀರ್ಷಿಕೆಗಳನ್ನು ನೀಡುವುದರ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಕಿಡಿಕಾರಿದ್ದಾರೆ.
ಬೆಂಗಳೂರು: ಕನ್ನಡ ಭಾಷಾ ಚಿತ್ರಗಳಿಗೆ ಅನ್ಯ ಭಾಷಾ ಶೀರ್ಷಿಕೆಗಳನ್ನು ನೀಡುವುದರ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಕಿಡಿಕಾರಿದ್ದು, ಅಂತಹ ಚಿತ್ರ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಾಧಿಕಾರದ ಅಧ್ಯಕ್ಷ ಚಂದ್ರು ಅವರು, ಇಂದು ಪತ್ರವೊಂದನ್ನು ಬರೆದಿದ್ದು, ಕನ್ನಡ ವಿರೋಧಿ ಚಿತ್ರಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಕೋರಿದ್ದಾರೆ. ಅಲ್ಲದೆ ತಾವೂ ಕೂಡ ಅನ್ಯ ಭಾಷಾ ಶೀರ್ಷಿಕೆಗಳ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಚಂದ್ರು ಸ್ಪಷ್ಟಪಡಿಸಿದ್ದಾರೆ.
'ಇತ್ತೀಚಿನ ದಿನಗಳಲ್ಲಿ ಕನ್ನಡ ಚಲನಚಿತ್ರಗಳು ಭಾಷಾ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತಿಲ್ಲ. ಕನ್ನಡ ಚಿತ್ರಗಳಿಗೆ ಅನ್ಯ ಭಾಷಾ ಶಿರ್ಷಿಕೆ ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ಹೀಗಾಗಿ ಕನ್ನಡ ಚಿತ್ರಗಳಿಗೆ ಅನ್ಯ ಭಾಷಾ ಶಿರ್ಷಿಕೆ ನೀಡುವುದನ್ನು ಕನ್ನಡ ವಿರೋಧಿ ನೀತಿ ಎಂದು ಪರಿಗಣಿಸಬೇಕು. ಅಂತಹ ಚಿತ್ರಗಳಿಗೆ ಯಾವುದೇ ರೀತಿಯ ಮಾನ್ಯತೆ ನೀಡಬಾರದು. ಪ್ರಶಸ್ತಿ ಆಯ್ಕೆ ಪಟ್ಟಿಗೂ ಇಂತಹ ಚಿತ್ರಗಳನ್ನು ಪರಿಗಣಿಸಬಾರದು' ಎಂದು ಚಂದ್ರು ಹೇಳಿದ್ದಾರೆ.
ಅಂತೆಯೇ ಅನ್ಯ ಭಾಷಾ ಶಿರ್ಷಿಕೆ ಉಳ್ಳ ಚಿತ್ರಗಳಿಗೆ ಸರ್ಕಾರ ಯಾವುದೇ ರೀತಿಯ ತೆರಿಗೆ ವಿನಾಯಿತಿ ನೀಡಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.