ಕೆಜೆಪಿಗೆ ಮೂವರು ಮುಖಂಡರ ರಾಜಿನಾಮೆ?
ಕೆಜೆಪಿ ಪಕ್ಷದ ಮೂವರು ಹಿರಿಯ ಮುಖಂಡರು ಪಕ್ಷಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರ ನಡವಳಿಕೆಯಿಂದ ಬೇಸತ್ತಿರುವ ಕೆಜೆಪಿ ಪಕ್ಷದ ಮೂವರು ಹಿರಿಯ ಮುಖಂಡರು ಪಕ್ಷಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ.
ಕೆಜೆಪಿ ಪಕ್ಷದ ಹಿರಿಯ ಮುಖಂಡರಾದ ಮುಕುಡಪ್ಪ, ವೈಜನಾಥ್ ಪಾಟೀಲ್ ಮತ್ತು ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಅವರು ಕೆಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಜೆಪಿ ಪಕ್ಷದ ಅಧ್ಯಕ್ಷ ಯಡಿಯೂರಪ್ಪ ಅವರು ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ತೀರ್ಮಾನಗಳಿಂದ ಬೇಸತ್ತು ಈ ಮೂವರು ಮುಖಂಡರು ರಾಜಿನಾಮೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಯಡಿಯೂರಪ್ಪ ಅವರು ಜ್ಯಾತ್ಯಾತೀತತೆಯಿಂದ ಕೋಮುವಾದದ ಕಡೆ ಮುಖ ಮಾಡಿರುವುದೇ ಮುಖಂಡರ ರಾಜಿನಾಮೆಗೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಅಲ್ಲದೆ ಪಕ್ಷದ ಪರವಾಗಿ ಯಡಿಯೂರಪ್ಪ ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಏಕಪಕ್ಷೀಯವಾಗಿರುವುದೂ ಕೂಡ ಮುಖಂಡರು ಅಸಮಾಧಾನಗೊಳ್ಳಲು ಕಾರಣ ಎನ್ನಲಾಗುತ್ತಿದೆ. ನಾಳೆ ಮಧ್ಯಾಹ್ನದ ಹೊತ್ತಿಗೆ ಈ ಮೂವರು ಮುಖಂಡರು ತಮ್ಮ ತಮ್ಮ ರಾಜಿನಾಮೆ ಪತ್ರಗಳನ್ನು ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ರವಾನಿಸುವ ಸಾಧ್ಯತೆಗಳಿವೆ.
ಬಿಜೆಪಿಯನ್ನು ತೊರೆದು ಕೆಜೆಪಿ ಕಟ್ಟಿದ್ದ ಯಡಿಯೂರಪ್ಪ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರೆತಿರಲಿಲ್ಲ. ಚುನಾವಣೆಯ ನಂತರ ಪಕ್ಷದಲ್ಲಿನ ಬೆಳವಣಿಗೆಗಳು ಯಡಿಯೂರಪ್ಪ ಮತ್ತೆ ಬಿಜೆಪಿಗೆ ವಾಪಾಸಾಗುತ್ತಾರೆ ಎಂಬ ಅನುಮಾನಕ್ಕೆ ಬೆಂಬಲ ನೀಡಿದ್ದವು. ಇದಕ್ಕೆ ಅನುಗುಣವಾಗಿ ಬಿಜೆಪಿಯ ಕೆಲ ಪ್ರಮುಖ ಮುಖಂಡರು ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವ ಕುರಿತು ದೆಹಲಿ ಮಟ್ಟದಲ್ಲಿ ಲಾಭಿ ಆರಂಭಿಸಿದ್ದರು. ಇದಕ್ಕೆ ತಕ್ಕಂತೆ ಯಡಿಯೂರಪ್ಪ ಅವರು ಕೂಡ ಬಿಜೆಪಿ ವಾಪಾಸಾಗುವುದರ ಕುರಿತು ಪರೋಕ್ಷ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು.
ಇದೀಗ ಯಡಿಯೂರಪ್ಪ ಅವರ ನಿರ್ಧಾರದಿಂದ ಬೇಸತ್ತಿರುವ ಕೆಜೆಪಿ ಮುಖಂಡರು ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾರೆ.