ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಮ್ಮ ಸೈನಿಕರು ದಾಳಿ ನಡೆಸಿಲ್ಲ: ಪಾಕ್

ಪಾಕಿಸ್ತಾನ ಸೈನಿಕರು ದಾಳಿ ಮಾಡಿಲ್ಲ. ಗಡಿ ನಿಯಂತ್ರಣ ರೇಖೆಯಲ್ಲಿ ಅಂತಹ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ಪಾಕಿಸ್ತಾನ ಹೇಳಿದೆ.

Srinivasa Murthy VN
Updated On : 6 Aug 2013, 3:43 am

ಇಸ್ಲಾಮಾಬಾದ್: ಭಾರತೀಯ ಸೈನಿಕರ ಮೇಲೆ ಪಾಕಿಸ್ತಾನ ಸೈನಿಕರು ದಾಳಿ ಮಾಡಿಲ್ಲ. ಗಡಿ ನಿಯಂತ್ರಣ ರೇಖೆಯಲ್ಲಿ ಅಂತಹ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ಪಾಕಿಸ್ತಾನ ಸೇನಾಧಿಕಾರಿಗಳು ಹೇಳಿದ್ದಾರೆ.

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಮಾತನಾಡಿದ ಪಾಕ್‌ನ ಹಿರಿಯ ಅಧಿಕಾರಿಯೊಬ್ಬರು, ಗಡಿಯಲ್ಲಿ ಪಾಕ್ ಸೈನಿಕರು ಭಾರತೀಯ ಸೈನಿಕರ ಮೇಲೆ ಯಾವುದೇ ದಾಳಿ ಮಾಡಿಲ್ಲ. ಪಾಕಿಸ್ತಾನ ಸೈನಿಕರು ಕದನ ವಿರಾಮವನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಚಕನ್ ದ ಬಾಗ್ ಮಿಲಿಟರಿ ಸೆಕ್ಟರ್ ಭಾಗದಲ್ಲಿ ಸೋಮವಾರ ಮಧ್ಯರಾತ್ರಿ 2ಗಂಟೆಯ ಸುಮಾರಿನಲ್ಲಿ ಗಸ್ತು ತಿರುಗುತ್ತಿದ್ದ ಐವರು ಭಾರತೀಯ ಯೋಧರನ್ನು ಸುಮಾರು 15 ರಿಂದ 20ಕ್ಕೂ ಅಧಿಕ ಪಾಕ್ ಸೈನಿಕರು ಸುತ್ತುವರೆದು, ಗುಂಡಿನ ದಾಳಿ ನಡೆಸಿ ಕೊಂದು ಹಾಕಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಇಂಡೋ ಪಾಕ್ ಗಡಿ ನಿಯಂತ್ರಣ ರೇಖೆ ಉದ್ವಿಗ್ನಗೊಂಡಿದೆ. ಅಲ್ಲದೆ ಪಾಕ್ ಸೈನಿಕರ ದುಷ್ಕೃತ್ಯದ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇತ್ತ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೈನಿಕರ ಹತ್ಯೆಯನ್ನು ಖಂಡಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೆ ತಮ್ಮ ಟ್ವಿಟರ್ ಖಾತೆಯ ಮೂಲಕ ಮೃತ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಪಾಕ್ ಸೈನಿಕರ ದುರ್ವರ್ತನೆಗೆ ಉಭಯ ಸದನಗಳಲ್ಲಿ ಆಕ್ರೋಶ

ಇತ್ತ ಭಾರತೀಯ ಸೈನಿಕರ ಹತ್ಯೆ ವಿಚಾರ ಸಂಸತ್ತಿನ ಉಭಯ ಸದನಗಳಲ್ಲಿಯೂ ಪ್ರತಿಧ್ವನಿಸಿದೆ. ರಾಜ್ಯಸಭೆಯ ವಿಪಕ್ಷ ನಾಯಕ ಅರುಣ್ ಜೇಟ್ಲಿ ಅವರು, ವಿಷಯವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಜೇಟ್ಲಿ ಅವರ ಪ್ರಶ್ನೆಗೆ ಉತ್ತರಿಸಿದ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಅವರು, ಪ್ರಕರಣ ಈಗಾಗಲೇ ಸರ್ಕಾರದ ಗಮನಕ್ಕೆ ಬಂದಿದ್ದು, ಸಂಬಂಧಿಸಿದ ಅಧಿಕಾರಿಗಳಿಂದ ವರದಿ ಕೇಳಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮಾತುಕತೆಗೆ ಸಿದ್ಧ: ಜ. ವಿಕ್ರಂ ಸಿಂಗ್
ಇಂಡೋ ಪಾಕ್ ಗಡಿಯಲ್ಲಿ ಭಾರತೀಯ ಸೈನಿಕರ ಹತ್ಯೆಯನ್ನು ಖಂಡಿಸಿರುವ ಭಾರತೀಯ ಭೂಸೇನೆ ಮುಖ್ಯಸ್ಥ ಜನರಲ್ ವಿಕ್ರಂ ಸಿಂಗ್ ಅವರು ಪಾಕ್ ಅಧಿಕಾರಿಗಳೊಂದಿಗೆ ಚರ್ಚಿಸಲು ತಾವು ಸಿದ್ಧವಿರುವುದಾಗಿ ಹೇಳಿದ್ದಾರೆ. ಅಲ್ಲದೆ ಪಾಕ್ ಸೈನಿಕರ ದುಷ್ಕೃತ್ಯವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement