ಪಾಕ್ ಸೈನಿಕ ಸಮವಸ್ತ್ರದಲ್ಲಿದ್ದ ಉಗ್ರರಿಂದ ದಾಳಿ: ಆಂಟನಿ
ಪಾಕಿಸ್ತಾನ ಸೈನಿಕ ಸಮವಸ್ತ್ರದಲ್ಲಿದ್ದ ಉಗ್ರರು ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.
ನವದೆಹಲಿ: ಪಾಕಿಸ್ತಾನ ಸೈನಿಕ ಸಮವಸ್ತ್ರದಲ್ಲಿದ್ದ ಉಗ್ರರು ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಸಚಿವ ಆಂಟನಿ ಅವರು, ಘಟನೆ ವಿವರವನ್ನು ನೀಡಿದರು. 'ಭಾರತೀಯ ಯೋಧರ ಮೇಲಿನ ದಾಳಿ ಅಕ್ಷಮ್ಯ. ಪಾಕಿಸ್ತಾನ ಸೈನಿಕ ಸಮವಸ್ತ್ರದಲ್ಲಿದ್ದ ಸುಮಾರು 20 ಉಗ್ರರು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳ ಮೂಲಕ ನಮ್ಮ ಸೈನಿಕರನ್ನು ಸುತ್ತುವರೆದು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಸುಮಾರು ಐವರು ಭಾರತೀಯ ಯೋಧರು ಸಾವನ್ನಪ್ಪಿದ್ದು, ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದಾನೆ. ಉಗ್ರರ ದಾಳಿಗೆ ಯೋಧರು ಪ್ರತಿ ದಾಳಿ ನಡೆಸಿದ್ದಾರೆ ಎಂದು ಆಂಟನಿ ತಿಳಿಸಿದರು.
ಭಾರತೀಯ ಯೋಧರ ಮೇಲಿನ ದಾಳಿ ಕುರಿತಂತೆ ಇಂದು ಸಂಸತ್ತಿನ ಉಭಯ ಸದನಗಳಲ್ಲಿಯೂ ಆಢಳಿತಾರೂಢ ಯುಪಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದಿದ್ದವು. ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು, ಪಾಕಿಸ್ತಾನ ವಿರುದ್ಧ ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದರು. 'ಪಾಕಿಸ್ತಾನ ಎಂದಿಗೂ ನಂಬಿಕೆ ಅರ್ಹವಲ್ಲದ ದೇಶ. ಕದನ ವಿರಾಮ ಉಲ್ಲಂಘನೆ ಬಗ್ಗೆ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಮುಲಾಯಂ ಪ್ರಶ್ನಿಸಿದರು.
ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ ರಕ್ಷಣಾ ಸಚಿವ ಆಂಟನಿ ಅವರು, ಯೋಧರ ಮೇಲಿನ ದಾಳಿ ವಿಚಾರವನ್ನು ಸರ್ಕಾರ ಎಂದೂ ಲಘುವಾಗಿ ಪರಿಗಣಿಸುವುದಿಲ್ಲ. ಈ ಬಗ್ಗೆ ಈಗಾಗಲೇ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ. ಸಂಬಂಧ ಪಟ್ಟ ಅಧಿಕಾರಿಗಳಿಂದ ನಾವು ವರದಿ ಪಡೆದುಕೊಂಡಿದ್ದು, ಪಾಕ್ ಸೈನಿಕ ಸಮವಸ್ತ್ರದಲ್ಲಿದ್ದ ಉಗ್ರರಿಂದ ದಾಳಿ ನಡೆದಿದೆ. ಘಟನೆಯ ವಿರುದ್ಧ ಕೇಂದ್ರ ಸರ್ಕಾರ ಪಾಕ್ ರಾಯಭಾರ ಅಧಿಕಾರಗಳ ಮೂಲಕ ಪಾಕಿಸ್ತಾನಕ್ಕೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ ಎಂದು ಸ್ಪಷ್ಟನೆ ನೀಡಿದರು.