ಕೋಲಾಹಲವೆಬ್ಬಿಸಿದ ಯೋಧರ ಹತ್ಯೆ ಪ್ರಕರಣ: ಕಲಾಪ ನಾಳೆಗೆ ಮುಂದೂಡಿಕೆ
ಗಡಿಯಲ್ಲಿ ಭಾರತೀಯ ಯೋಧರ ಹತ್ಯೆ ಪ್ರಕರಣ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ವೆಬ್ಬಿಸಿದ್ದು, ಕಲಾಪವನ್ನು ಮುಂದೂಡಲಾಗಿದೆ.
ನವದೆಹಲಿ: ಗಡಿಯಲ್ಲಿ ಭಾರತೀಯ ಯೋಧರ ಹತ್ಯೆ ಪ್ರಕರಣ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲವೆಬ್ಬಿಸಿದ್ದು, ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಗಿದೆ.
ಆಹಾರ ಭದ್ರತಾ ಮಸೂದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಇಂದು ವಾಪಸ್ ಪಡೆದು, ಮತ್ತೆ ಸಭೆಯಲ್ಲಿ ಮಸೂದೆ ಮಂಡನೆಗೆ ಮುಂದಾಯಿತು. ಕೇಂದ್ರ ಆಹಾರ ಸಚಿವ ಕೆ.ವಿ.ಥಾಮಸ್ ಅವರು ಮಸೂದೆ ಮಂಡನೆಗೆ ಮುಂದಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಅವರಿಗೆ ಅಡ್ಡಿ ಉಂಟುಮಾಡಿದವು. ಅಲ್ಲದೆ ಆಹಾರ ಮಸೂದೆ ಮಂಡನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದವು.
ಪ್ರಮುಖ ಪ್ರತಿಪಕ್ಷ ಬಿಜೆಪಿ 'ಆಹಾರ ಭದ್ರತೆಗಿಂತಲೂ ಗಡಿ ಭದ್ರತೆಯೇ ಮುಖ್ಯ' ಎಂದು ತನ್ನ ವಾದವನ್ನು ಮಂಡಿಸಿತು. ಕಲಾಪದಲ್ಲಿ ಮಾತನಾಡಿದ ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು, 'ದೇಶದ ಭಧ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮೃದು ಧೋರಣೆಯನ್ನು ತಳೆಯುತ್ತಿದೆ. ಆಹಾರ ಭದ್ರತೆಗಿಂತಲೂ ದೇಶದ ಗಡಿಭದ್ರತೆಯೇ ಮುಖ್ಯವಾದುದು' ಎಂದು ಹೇಳಿದರು. ಅಂತೆಯೇ ಆಹಾರ ಮಸೂದೆ ಕುರಿತು ಮಾತನಾಡಿದ ಡಿಎಂಕೆ ಪಕ್ಷ, 'ಮೊದಲು ಮಸೂದೆ ಕುರಿತು ಚರ್ಚೆಯಾಗಬೇಕು. ಅನಂತರವೇ ಮಸೂದೆಯನ್ನು ಮಂಡಿಸಬೇಕು' ಎಂದು ಆಗ್ರಹಿಸಿತು.
ರಾಜ್ಯಸಭೆಯಲ್ಲಿಯೂ ಗದ್ದಲ
ಭಾರತೀಯ ಯೋಧರ ಹತ್ಯೆ ಪ್ರಕರಣ ರಾಜ್ಯಸಭೆಯಲ್ಲಿಯೂ ಪ್ರತಿಧ್ವನಿಸಿದ್ದು, ಪ್ರತಿಪಕ್ಷಗಳು ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ಹೇಳಿಕೆ ವಿರುದ್ಧ ಹರಿಹಾಯ್ದಿವೆ. ರಕ್ಷಣಾ ಸಚಿವರ ಹೇಳಿಕೆಗೂ, ಭಾರತೀಯ ಸೇನೆ ಬಿಡುಗಡೆ ಮಾಡಿರುವ ಹೇಳಿಕೆಗೂ ಅಜಗಜಾಂತರ ವ್ಯತ್ಯಾಸವಿದ್ದು, ಹಿನ್ನಲೆಯನ್ನು ಅರಿಯದೇ ಹೇಳಿಕೆ ನೀಡಿದ ರಕ್ಷಣಾ ಸಚಿವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ. ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಯಿಂದಾಗಿ ಉಭಯ ಸದನಗಳನ್ನು ನಾಳೆಗೆ ಮುಂದೂಡಲಾಗಿದೆ.
ಒಟ್ಟಾರೆ ಭಾರತೀಯ ಯೋಧರ ಹತ್ಯೆ ಪ್ರಕರಣ ಸಂಸತ್ತಿನ ಉಭಯ ಸದನಗಳಲ್ಲಿಯೂ ಕೋಲಾಹಲವೆಬ್ಬಿಸಿದ್ದು, ಪ್ರಕರಣ ಸಂಬಂಧ ರಕ್ಷಣಾ ಸಚಿವರು ನೀಡಿರುವ ಹೇಳಿಕೆಯೇ ಪ್ರತಿಪಕ್ಷಗಳ ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿದೆ. ಈ ಹಿಂದೆ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು, ಪಾಕ್ ಸೈನಿಕ ಸಮವಸ್ತ್ರದಲ್ಲಿದ್ದ ಉಗ್ರರು ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದ್ದರು. ಆದರೆ ಇದಕ್ಕೆ ತದ್ವಿರುದ್ಧವೆಂಬಂತೆ ಸೇನೆ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ, ಪಾಕ್ ಸೈನಿಕರೇ ಗಡಿ ದಾಟಿ ಬಂದು ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಿತ್ತು. ಹೀಗಾಗಿ ರಕ್ಷಣಾ ಸಚಿವರ ಹೇಳಿಕೆ ವಿರುದ್ಧ ಪ್ರತಿಪಕ್ಷಗಳು ತಿರುಗಿಬಿದ್ದಿವೆ.
ಈ ನಡುವೆ ಕೇಂದ್ರ ಸರ್ಕಾರದ ಉದ್ದೇಶಿತ ಆಹಾರ ಭದ್ರತಾ ಮಸೂದೆ ಮಂಡನೆಗೂ ಕೂಡ ಭಾರತೀಯ ಯೋಧರ ಹತ್ಯೆ ಪ್ರಕರಣ ತೊಡಕಾಗಿದ್ದು, ಪ್ರತಿಪಕ್ಷಗಳು ಆಹಾರ ಭದ್ರತೆಗಿಂತ ದೇಶದ ಗಡಿ ಭದ್ರತೆಯೇ ಮುಖ್ಯ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ. ಆದರೆ ಆಹಾರ ಭದ್ರತಾ ಮಸೂದೆಯನ್ನು 2014ರ ಲೋಕಸಭಾ ಚುನವಾಣೆಯೊಳಗೆ ಜಾರಿಗೆ ತರಬೇಕೆನ್ನುವ ಯುಪಿಎ ಸರ್ಕಾರದ ಪ್ರಯತ್ನಕ್ಕೆ ಮತ್ತೆ ಪ್ರತಿಪಕ್ಷ ಬಿಜೆಪಿ ತಣ್ಣೀರೆರಚಿದೆ.
ಪಾಕ್ ರಾಯಭಾರ ಕಚೇರಿ ಎದುರು ಕೈ ಕಾರ್ಯಕರ್ತರ ಪ್ರತಿಭಟನೆ
ಇತ್ತ ಲೋಕಸಭೆಯಲ್ಲಿ ಯೋಧರ ಹತ್ಯೆ ಪ್ರಕರಣ ಕೋಲಾಹಲವೆಬ್ಬಿಸಿದ್ದರೆ ಅತ್ತ ಪಾಕ್ ರಾಯಭಾರ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಎದುರು ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ ದೇಶದ ಬಾವುಟವನ್ನು ಹರಿದು ತಮ್ಮ ಆಕ್ರೋಶವನ್ನು ವಕ್ತಪಡಿಸುತ್ತಿದ್ದಾರೆ. ಅಲ್ಲದೆ ಪಾಕಿಸ್ತಾನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಪ್ರತಿಭಟನಾ ನಿರತರ ಮೇಲೆ ಆಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸುತ್ತಿದ್ದಾರೆ.