'ಪಾಕ್ ಮೇಲೆ ನಂಬಿಕೆ; ಹಾಸ್ಯಸ್ಪದ': ಗಂಭೀರ್
ಪಾಕಿಸ್ತಾನ ದೇಶವನ್ನು ನಂಬುವುದು ಎಂದರೆ ಅದೊಂದು ದೊಡ್ಡ ತಮಾಷೆ ಎಂದು ಭಾರತೀಯ ಕ್ರಿಕೆಟ್ ತಂಡದ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ನವದೆಹಲಿ: ಪಾಕಿಸ್ತಾನ ದೇಶವನ್ನು ನಂಬುವುದು ಎಂದರೆ ಅದೊಂದು ದೊಡ್ಡ ತಮಾಷೆ ಎಂದು ಭಾರತೀಯ ಕ್ರಿಕೆಟ್ ತಂಡದ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಭಾರತೀಯ ಯೋಧರ ಮೇಲಿನ ದಾಳಿ ಕುರಿತು ಟ್ವೀಟ್ ಮಾಡಿರುವ ಗೌತಿ, ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ. 'ಪಾಕ್ ನಂಬಿಕೆಗೆ ಅರ್ಹವಲ್ಲದ ದೇಶ. ಇತ್ತೀಚೆಗೆ ನಾನು ಕೆಲವು ದಿನಪತ್ರಿಕೆಗಳಲ್ಲಿ ಕಂಡಂತೆ ಪಾಕಿಸ್ತಾನ ಸುಮಾರು 57 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿ ಭಾರತೀಯ ಯೋಧರ ಮೇಲೆ ದಾಳಿ ಮಾಡಿದೆ. ಪದೇ ಪದೇ ಇಂತಹ ಘಟನೆಗಳೇ ಪುನಾರಾವರ್ತನೆಯಾಗುತ್ತಿದ್ದು, ಈಗಲೂ ಕೂಡ ಪಾಕಿಸ್ತಾನವನ್ನು ನಂಬುವುದು ಎಂದರೆ ಅದೊಂದು ದೊಡ್ಡ ಹಾಸ್ಯ' ಎಂದು ಗಂಭೀರ್ ಹೇಳಿದ್ದಾರೆ.
ಸೋಮವಾರ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಂದಿದ್ದ ಪಾಕಿಸ್ತಾನ ಯೋಧರು, ಅಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಯೋಧರನ್ನು ಸುತ್ತುವರೆದು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಓರ್ವ ಬ್ರಿಗೇಡಿಯರ್ ಸಮೇತ ಐವರು ಯೋಧರು ಸಾವಿಗೀಡಾಗಿ, ಓರ್ವ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದನು. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪಾಕ್ ಯೋಧರ ದುಷ್ಕೃತ್ಯದ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.