ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಸಿಲ್ಕ್' ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ ಮಧ್ಯಂತರ ತಡೆ

ಸಿಲ್ಕ್ ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ ನ್ಯಾಯಾಲಯ ಮಧ್ಯಂತರ ತಡೆ ನೀಡಿದ್ದು, ನಾಳೆಯಿಂದಲೇ ಚಿತ್ರ ಪ್ರದರ್ಶನವನ್ನು ನಿಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Srinivasa Murthy VN
Updated On : 7 Aug 2013, 7:29 am

ಬೆಂಗಳೂರು: ಸಿಲ್ಕ್ ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ ನ್ಯಾಯಾಲಯ ಮಧ್ಯಂತರ ತಡೆ ನೀಡಿದ್ದು, ನಾಳೆಯಿಂದಲೇ ಚಿತ್ರ ಪ್ರದರ್ಶನವನ್ನು ನಿಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಚಿತ್ರದಲ್ಲಿ ಅರೆಬೆತ್ತಲೆ ದೃಶ್ಯಗಳು ಹೆಚ್ಚಾಗಿದ್ದು, ಸಾಮಾಜಿಕ ಸ್ವಾಸ್ಥ್ಯಕ್ಕೆ ಈ ಚಿತ್ರದಿಂದ ಧಕ್ಕೆಯಾಗುತ್ತದೆ ಎಂದು ಆರೋಪಿಸಿ ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ ಭೀಮಾಶಂಕರ್ ಪಾಟೀಲ್ ಅವರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ದೂರುದಾರರ ದೂರನ್ನು ಪರಿಶೀಲಿಸಿದ ನ್ಯಾಯಾಲಯ ಚಿತ್ರ ಪ್ರದರ್ಶನಕ್ಕೆ ತಾತ್ಕಾಲಿಕ ತಡೆ ನೀಡಿದೆ.

ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 10ರಂದು ನಡೆಸಲಿದ್ದು, ಸೆಪ್ಟೆಂಬರ್ 10ರವರೆಗೂ ಚಿತ್ರ ಪ್ರದರ್ಶನ ನಡೆಸುವಂತಿಲ್ಲ ಎಂದು ದೂರುದಾರ ಭೀಮಾಶಂಕರ್ ಪಾಟೀಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ನ್ಯಾಯಾಲಯದ ಆದೇಶದ ಕುರಿತು ಚಿತ್ರದ ನಿರ್ಮಾಪಕರನ್ನು ವಿಚಾರಿಸಿದಾಗ ಅವರು ತಮಗೆ ಈ ಬಗ್ಗೆ ಯಾವುದೇ ಆದೇಶದ ಪ್ರತಿ ಲಭಿಸಿಲ್ಲ. ಆದೇಶದ ಪ್ರತಿ ಲಭಿಸಿದ ನಂತರ ಆ ಬಗ್ಗೆ ಯೋಚಿಸುವುದಾಗಿ ತಿಳಿಸಿದ್ದಾರೆ.

ಕನ್ನಡದ ಸಿಲ್ಕ್ ಚಿತ್ರ ಆರಂಭದಿಂದಲೂ ವಿವಾದದಲ್ಲಿ ಮುಳುಗಿತ್ತು. ಆರಂಭದಲ್ಲಿ ಇದನ್ನು ಹಿಂದಿಯ 'ದಿ ಡರ್ಟಿ ಪಿಕ್ಚರ್'ನ ಕನ್ನಡ ಅವತರಣಿಕೆ ಚಿತ್ರ ಎನ್ನಲಾಗುತ್ತಿದ್ದರೂ, ಅನಂತರ ನಿರ್ಮಾಪಕರು ಎರಡೂ ಚಿತ್ರಗಳು ಬೇರೆ ಬೇರೆ ಎಂದು ಸ್ಪಷ್ಟಪಡಿಸಿದರು. ಅನಂತರ ಚಿತ್ರದ ನಾಯಕಿಯ ಪಾತ್ರಕ್ಕೆ ಪಾಕಿಸ್ತಾನದ ವಿವಾದಿತ ನಟಿ ವೀಣಾ ಮಲ್ಲಿಕ್ ಅವರನ್ನು ಆಯ್ಕೆ ಮಾಡುವ ಮೂಲಕ ಮತ್ತೆ ಚಿತ್ರತಂಡ ಸುದ್ದಿಯಾಯಿತು. ಪಾಕಿಸ್ತಾನದ ನಟಿಯೊಬ್ಬಳು ಭಾರತೀಯ ಚಿತ್ರದಲ್ಲಿ ನಟಿಸುವುದನ್ನು ಶ್ರೀರಾಮಸೇನೆ ಸಂಘಟನೆ ತೀವ್ರವಾಗಿ ವಿರೋಧಿಸಿತ್ತು. ವೀಣಾ ಮಲ್ಲಿಕ್ರನ್ನು ಕನ್ನಡಕ್ಕೆ ತರಲು ತಾವು ಬಿಡುವುದಿಲ್ಲ ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಎಚ್ಚರಿಕೆ ನೀಡಿದ್ದರು. ಈ ನಡುವೆಯೂ ಚಿತ್ರೀಕರಣ ಮುಗಿಸಿದ ಚಿತ್ರತಂಡ ಚಿತ್ರವನ್ನು ರಿಲೀಸ್ ಮಾಡಿತ್ತು.

ಮೊನ್ನೆಯಷ್ಟೇ ಚಿತ್ರದ ಪ್ರಚಾರಕ್ಕಾಗಿ ನಟಿ ವೀಣಾ ಮಲ್ಲಿಕ್ ಅವರು ಬೆಂಗಳೂರಿಗೆ ಅಗಮಿಸಿ ಚಿತ್ರದ ಪ್ರಚಾರ ನಡೆಸಿದ್ದರು. ಅಲ್ಲದೆ ಚಿತ್ರಮಂದಿರದ ಟಿಕೆಟ್ ಕೌಂಟರ್ನಲ್ಲಿ ಕುಳಿತು ಅಭಿಮಾನಿಗಳಿಗೆ ಟಿಕೆಟ್ ನೀಡುವ ಮೂಲಕ ಪ್ರಚಾರ ಮಾಡಿದ್ದರು. ಇದೀಗ ನ್ಯಾಯಾಲಯ ಚಿತ್ರ ಪ್ರದರ್ಶನಕ್ಕೆ ತಡೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement