108 ಸಿಬ್ಬಂದಿ ಮುಷ್ಕರಕ್ಕೆ 'ತಾತ್ಕಾಲಿಕ' ಅಂತ್ಯ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸತತ 14 ದಿನಗಳಿಂದ ನಡೆಯುತ್ತಿದ್ದ 108 ಸಿಬ್ಬಂದಿಗಳ ಮುಷ್ಕರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸತತ 14 ದಿನಗಳಿಂದ ನಡೆಯುತ್ತಿದ್ದ 108 ಸಿಬ್ಬಂದಿಗಳ ಮುಷ್ಕರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಆರೋಗ್ಯ ಸಚಿವ ಯುಟಿ ಖಾದರ್ ಅವರ ಮಧ್ಯಪ್ರವೇಶ ಮತ್ತು ಮುಷ್ಕರ ನಡೆಸದಂತೆ ಹೈಕೋರ್ಟ್ ನೀಡಿದ್ದ ಸೂಚನೆಗೆ ತಲೆಬಾಗಿರುವ 108 ಸಿಬ್ಬಂದಿಗಳು, ಇಂದು ತಮ್ಮ ಪ್ರತಿಭಟನೆಗೆ ತಾತ್ಕಾಲಿಕ ತೆರೆ ಎಳೆದಿದ್ದಾರೆ. ಮುಷ್ಕರ ನಿರತ ಸಿಬ್ಬಂದಿಗಳನ್ನು ಇಂದು ಭೇಟಿ ಮಾಡಿದ ಜಿವಿಕೆ ಸಂಸ್ಥೆಯ ಅಧಿಕಾರಿಗಳು ಸದ್ಯ ಅಮಾನತುಗೊಂಡಿರುವ 194 ಸಿಬ್ಬಂದಿಗಳನ್ನು ಪುನರ್ ನೇಮಕ ಮಾಡಿಕೊಳ್ಳಲು ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ಸಿಬ್ಬಂದಿಗಳು ಮುಷ್ಕರವನ್ನು ಹಿಂಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಸದ್ಯಕ್ಕೆ ಮುಷ್ಕರ ಅಂತ್ಯವಾಗಿದ್ದರೂ ಮತ್ತೆ ಮುಷ್ಕರ ಆರಂಭಿಸುವ ಕುರಿತು ಅನುಮಾನಗಳು ಮೂಡಿವೆ. ಏಕೆಂದರೆ ಸದ್ಯ ಮುಷ್ಕರ ವಾಪಸ್ ಪಡೆದಿರುವ ಸಿಬ್ಬಂದಿಗಳು ತಮ್ಮ ಬೇಡಿಕೆಗಳು ಸಂಪೂರ್ಣವಾಗಿ ಈಡೇರದಿದ್ದರೆ ಮತ್ತೆ ಮುಷ್ಕರ ನಡೆಸುವುದಾಗಿ ಹೇಳಿದ್ದಾರೆ. ಈ ಹಿಂದೆ ನಗರದ ಫ್ರೀಡಂ ಪಾರ್ಕ್ನಲ್ಲಿ ಮುಷ್ಕರ ನಿರತ 108 ಸಿಬ್ಬಂದಿಗಳನ್ನು ಭೇಟಿಮಾಡಿದ್ದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು, ಅವರ ಬೇಡಿಕೆ ಈಡೇರಿಸುವ ಕುರಿತು ಭರವಸೆ ನೀಡಿದ್ದರು. ಅಲ್ಲದೆ ಇದೇ ಆಗಸ್ಟ್ 14ರಂದು ಸಭೆ ನಡೆಸುವುದಾಗಿ ತಿಳಿಸಿದ್ದರು.
ಅದರಂತೆ ಆಗಸ್ಟ್ 14ರಂದು ನಡೆಯುವ ಸಭೆಯಲ್ಲಿ ಸಿಬ್ಬಂದಿಗಳ ಮುಷ್ಕರದ ಭವಿಷ್ಯ ತಿಳಿಯಲಿದೆ. ಅಂದು 108 ಸಿಬ್ಬಂದಿ, ಜಿವಿಕೆ ಸಂಸ್ಥೆಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಸಭೆ ನಡೆಸಲಿದೆ. ಒಂದು ವೇಳೆ ಅಂದಿನ ಸಭೆಯಲ್ಲಿ ಒಮ್ಮತ ಮೂಡದಿದ್ದರೆ ಮತ್ತೆ ಸಿಬ್ಬಂದಿಗಳು ಮುಷ್ಕರದಲ್ಲಿ ತೊಡಗಲಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ 108 ಸಿಬ್ಬಂದಿಗಳ ಸಂಘದ ಉಪಾಧ್ಯಕ್ಷ ಪರಮಶಿವಯ್ಯ ಅವರು, ಸದ್ಯ ಮುಷ್ಕರವನ್ನು ಹಿಂಪಡೆದಿದ್ದೇವೆ. ನಾಳೆಯಿಂದಲೇ ನಮ್ಮ ಎಲ್ಲ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇದೇ ಆಗಸ್ಟ್ 14ರಂದು ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಲಿದ್ದೇವೆ. ಅಂದಿನ ಸಭೆ ಫಲಪ್ರದವಾಗದಿದ್ದರೆ, ಮರು ದಿನದಿಂದಲೇ ಮತ್ತೆ ಮುಷ್ಕರ ಮಾಡುತ್ತೇವೆ ಎಂದು ಹೇಳಿದರು.