ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ತೆಲಂಗಾಣ ವಿರೋಧಿ ಹೋರಾಟ: ಮತ್ತೊಬ್ಬ ಆಂಧ್ರ ಸಚಿವರ ರಾಜಿನಾಮೆ

Srinivasa Murthy VN
Updated On : 8 Aug 2013, 6:57 am

ಹೈದರಾಬಾದ್: ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿ ಗುರುವಾರ ಮತ್ತೋರ್ವ ಆಂಧ್ರ ಪ್ರದೇಶ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಆಂಧ್ರಪ್ರದೇಶದ ಅಂಚೆ ಚೀಟಿ ಮತ್ತು ನೋಂದಣಿ ಸಚಿವರಾಗಿದ್ದ ಥೋಟಾ ನರಸಿಂಹಂ ಅವರು, ಸಮೈಕ್ಯ ಆಂಧ್ರ ಹೋರಾಟಕ್ಕೆ ಬೆಂಬಲ ಸೂಚಿಸಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಇಂದು ಮಧ್ಯಾಹ್ನ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದ ನರಸಿಂಹಂ ಅವರು ರಾಜಿನಾಮೆ ಪತ್ರವನ್ನು ನೀಡಿದ್ದಾರೆ. ಈ ಮೂಲಕ ಸಮೈಕ್ಯ ಆಂಧ್ರ ಪ್ರತಿಭಟನೆಯನ್ನು ಬೆಂಬಲಿಸಿ ರಾಜಿನಾಮೆ ನೀಡಿದ ಸಚಿವರ ಪಟ್ಟಿ ಆರಕ್ಕೇರಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಸಕರು ಮತ್ತು ಸಚಿವರು ರಾಜಿನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆಂಧ್ರ ಪ್ರದೇಶದಾದ್ಯಂತ ಈಗಾಗಲೇ ಸುಮಾರು 50 ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಈ ಐವತ್ತು ಶಾಸಕರ ರಾಜಿನಾಮೆಗಳು ಅಂಗೀಕಾರವಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈ ನಡುವೆ ರಾಜ್ಯ ವಿಭಜನೆಯನ್ನು ಖಂಡಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟ ದಿನೇ ದಿನೇ ಕಾವೇರುತ್ತಿದ್ದು, ಇಂದು ಕೂಡ ಹಲವು ಶಾಸಕರು ಮತ್ತು ಸಚಿವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪಶುಸಂಗೋಪನಾ ಸಚಿವ ಪಿ.ವಿಶ್ವರೂಪು ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಮತ್ತು ಗಣಿ ಮತ್ತು ಭೂಗರ್ಭ ಇಲಾಖೆಯ ಸಚಿವೆ ಜಿ.ಅರುಣ ಕುಮಾರಿ ಅವರು ತಿರುಪತಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement