ಮತ್ತೆ ಒಳನುಸುಳಿದ ಪಾಕ್ ಸೈನಿಕರು: ಸೇನಾ ಕಾರ್ಯಚರಣೆ ತೀವ್ರ
ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿ ಪಾಕ್ ಸೈನಿಕರು ಗಡಿಯೊಳಗೆ ನುಸುಳಿದ್ದು, ಒಳ ನುಸುಳಿರುವ ಸೈನಿಕರಿಗಾಗಿ ಬಿಎಸ್‌ಎಫ್ ಯೋಧರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ಶ್ರೀನಗರ: ಪಾಕಿಸ್ತಾನ ಸೈನಿಕರು ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿ ಭಾರತೀಯ ಗಡಿಯೊಳಗೆ ನುಸುಳಿದ್ದು, ಒಳ ನುಸುಳಿರುವ ಪಾಕ್ ಸೈನಿಕರಿಗಾಗಿ ಗಡಿ ರಕ್ಷಣಾ ಸಿಬ್ಬಂದಿ (ಬಿಎಸ್‌ಎಫ್) ಯೋಧರು ಪೂಂಛ್ ಜಿಲ್ಲೆಯಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ ಇಂದು ಮುಂಜಾನೆ ಸುಮಾರು 5: 30ರ ಸಮಯದಲ್ಲಿ ಭಾರತೀಯ ಯೋಧರ ಕಣ್ತಪ್ಪಿಸಿ ಪಾಕ್ ಸೈನಿಕರ ಸಮೇತ ಹಲವು ಪಾಕಿಸ್ತಾನಿ ಪ್ರಜೆಗಳು ಭಾರತೀಯ ಗಡಿಯ ಒಳಗೆ ನುಸುಳಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಒಳನುಸುಳಿರುವ ಒಂದು ಗುಂಪಿನ ಯುವಕರು ಭಾರತೀಯ ಯೋಧರತ್ತ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದೀಗ ಗಡಿ ನಿಯಂತ್ರಣ ರೇಖೆ ಉದ್ವಿಗ್ನಗೊಂಡಿದ್ದು, ಬಿಎಸ್‌ಎಫ್ ಯೋಧರು ಒಳ ನುಸುಳಿರುವ ಪಾಕ್ ಸೈನಿಕರು ಮತ್ತು ಯುವಕರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಅವರನ್ನು ಹಿಮ್ಮೆಟಿಸಲು ಭಾರತೀಯ ಯೋಧರು ಹರಸಾಹಸ ಪಡುತ್ತಿದ್ದು, ಸ್ಥಳೀಯ ಪ್ರಜೆಗಳೊಂದಿಗೆ ಬೆರೆತು ಹೋಗಿರುವ ನುಸುಳುಕೋರರನ್ನು ಹುಡುಕಿ ಅವರನ್ನು ಪಾಕಿಸ್ತಾನಕ್ಕೆ ಅಟ್ಟುವುದು ಬಿಎಸ್‌ಎಫ್ ಯೋಧರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನು ಸ್ಪಷ್ಟಪಡಿಸಿರುವ ಭಾರತೀಯ ಸೇನೆಯ ಅಧಿಕಾರಿಗಳು, ನುಸುಳುಕೋರರನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಆರಂಭವಾಗಿದೆ. ಶೀಘ್ರದಲ್ಲಿ ಅವರನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಹೇಳಿದ್ದಾರೆ.
ಇದೇ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಪಾಕಿಸ್ತಾನಿ ಸೈನಿಕರು ಭಾರತೀಯ ಗಡಿ ಪ್ರವೇಶ ಮಾಡಿ ಐವರು ಯೋಧರನ್ನು ಹತ್ಯೆಗೈದಿದ್ದರು.
ಕಾಶ್ಮೀರಕ್ಕಾಗಿ ಶರೀಫ್ ಮೇಲೆ ಒತ್ತಡ ಹೇರುತ್ತಿರುವ ಐಎಸ್‌ಐ
ಇದೇ ವೇಳೆ ಕಾಶ್ಮೀರವನ್ನು ಪಡೆಯುವ ನಿಟ್ಟಿನಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ನೂತನ ಪ್ರಧಾನಿ ನವಾಜ್ ಶರೀಫ್ ಅವರ ಮೇಲೆ ನಿರಂತರ ಒತ್ತಡ ಹೇರುತ್ತಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕಾಶ್ಮೀರವನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಐಎಸ್‌ಐ ಪ್ರಧಾನಿ ನವಾಜ್ ಶರೀಫ್ ಅವರಿಗೆ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ ಕೂಡ ಗೃಹ ಸಚಿವಾಲಯಕ್ಕೆ ತನ್ನ ವರದಿ ನೀಡಿದ್ದು, ಐಎಸ್‌ಐನ ಕೆ-ಪ್ಲಾನ್ (ಕೆ-ಕಾಶ್ಮೀರ) ಬಗ್ಗೆ ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ. ಮುಂದಿನ ಸೆಪ್ಟೆಂಬರ್ ತಿಂಗಳನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ನವಾಜ್ ಶರೀಫ್ ಮತ್ತು ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರು ಪರಸ್ಪರ ಭೇಟಿಯಾಗಲಿದ್ದು, ಈ ವೇಳೆ ಕಾಶ್ಮೀರ ವಿಚಾರವೇ ಪ್ರಮುಖವಾಗಿ ಚರ್ಚೆಗೆ ಬರಲಿದೆ.