ಭ್ರೂಣ ಲಿಂಗ ಪತ್ತೆ: ಶಾರುಖ್ ದಂಪತಿ ವಿರುದ್ಧ ದೂರು
ಭ್ರೂಣ ಲಿಂಗ ಪತ್ತೆ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ ದಂಪತಿಗಳ ವಿರುದ್ಧ ಖಾಸಗಿ ದೂರು ದಾಖಲಾಗಿದೆ.
ಮುಂಬೈ: ಭ್ರೂಣ ಲಿಂಗ ಪತ್ತೆ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ ದಂಪತಿಗಳ ವಿರುದ್ಧ ಖಾಸಗಿ ದೂರು ದಾಖಲಾಗಿದೆ.
ಮೂರನೇ ಮಗುವನ್ನು ಹೊಂದಿದ ಖುಷಿಯಲ್ಲಿರುವ ಖಾನ್ ದಂಪತಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ವಕೀಲರೊಬ್ಬರು ಶಾರುಖ್ ಖಾನ್ ದಂಪತಿ ವಿರುದ್ಧ ಮುಂಬೈ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು, ಶಾರುಖ್ ಖಾನ್ ದಂಪತಿ ಕಾನೂನು ಬಾಹಿರವಾಗಿ ತಮ್ಮ ಮೂರನೇ ಮಗು ಜನಿಸುವ ಮೊದಲೇ ಮಗವಿನ ಭ್ರೂಣ ಲಿಂಗ ಪತ್ತೆ ಮಾಡಿದ್ದರು ಎಂದು ಆರೋಪಿಸಿ ವರ್ಷಾ ದೇಶಪಾಂಡೆ ಎಂಬ ವಕೀಲರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಈಗಾಗಲೇ ಇಬ್ಬರು ಮಕ್ಕಳನ್ನು ಹೊಂದಿರುವ ಶಾರುಖ್ ದಂಪತಿ ಮತ್ತೊಂದು ಮಗುವನ್ನು ಪಡೆಯುವ ಉದ್ದೇಶದಿಂದ ಬಾಡಿಗೆ ತಾಯಿಯ ನೆರವಿನಿಂದ ಜುಲೈ ತಿಂಗಳ ಅಂತ್ಯದಲ್ಲಿ ಮೂರನೇ ಮಗುವನ್ನು ಪಡೆದಿದ್ದರು. ಶಾರುಖ್ ಮಗು ಪಡೆಯುತ್ತಿರುವ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ಜನಿಸುವ ಮಗುವಿನ ಲಿಂಗದ ಕುರಿತು ಕೂಡ ಮಾಹಿತಿ ನೀಡಿದ್ದವು. ಮಾಧ್ಯಮಗಳ ವರದಿಯನ್ನು ಆಧರಿಸಿ ವಕೀಲರು ಈ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆಯೂ ಕೂಡ ಶಾರುಖ್ ದಂಪತಿ ವಿರುದ್ಧ ಇದೇ ಆರೋಪ ಕೇಳಿಬಂದಿತ್ತು. ಆದರೆ ಶಾರುಖ್ ದಂಪತಿ ಈ ಆರೋಪವನ್ನು ನಿರಾಕರಿಸಿದ್ದರು. ಈ ವೇಳೆ ಶಾರುಖ್ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ್ದ ಆರೋಗ್ಯಾಧಿಕಾರಿಗಳಿಗೆ ಯಾವುದೇ ಸಾಕ್ಷ್ಯಾಧಾರಗಳು ದೊರೆಯದ ಕಾರಣ ಅವರು ಪ್ರಕರಣವನ್ನು ಕೈಬಿಟ್ಟಿದ್ದರು. ಆದರೆ ದೂರು ನೀಡಿದ್ದ ವಕೀಲೆ ವರ್ಷಾ ದೇಶಪಾಂಡೆ ಅವರು ಮುಂಬೈ ಮಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ನ್ಯಾ.ಉದಯ್ ಪಡ್ವಾದ್ ಅವರು, ಸೆಪ್ಟೆಂಬರ್ 12ರಂದು ಪ್ರಕರಣದ ವಿಚಾರಣೆಯನ್ನು ನಿಗದಿ ಪಡಿಸಿದ್ದಾರೆ. ಅಲ್ಲದೆ ಶಾರುಖ್ ದಂಪತಿಗೆ ನೋಟಿಸ್ ಕೂಡ ಜಾರಿ ಮಾಡಿದ್ದಾರೆ. ಭಾರತೀಯ ಮಕ್ಕಳ ಹಕ್ಕು ಕಾಯ್ದೆಯ ಅನ್ವಯ ಮಕ್ಕಳ ಜನನಕ್ಕೂ ಮೊದಲೇ ಭ್ರೂಣದ ಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು, ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.