ವಿಶ್ವ ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಪಿ.ವಿ.ಸಿಂಧು
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಆಟಗಾರ್ತಿ ಪಿ.ವಿ.ಸಿಂಧು ಅವರು ಜಯಗಳಿಸಿದ್ದು, ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.
ಗ್ಯಾಂಗ್‌ಜೌ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಆಟಗಾರ್ತಿ ಪಿ.ವಿ.ಸಿಂಧು ಅವರು ಜಯಗಳಿಸಿದ್ದು, ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.
ಚೀನಾದ ಗ್ಯಾಂಗ್‌ಜೌನಲ್ಲಿ ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಚೀನಾದ ಶಿಕ್ಸಿಯಾನ್ ಅವರನ್ನು 12ನೇ ಶ್ರೇಯಾಂಕಿತ ಆಟಗಾರ್ತಿ ಭಾರತದ ಪಿ.ವಿ.ಸಿಂಧು ಅವರು 21-18, 21-17 ನೇರ ಸೆಟ್‌ಗಳಿಂದ ಮಣಿಸಿದರು.
ತಿಯಾನ್ಹೆ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಕೇವಲ 55 ನಿಮಿಷಗಳಲ್ಲಿ ಅಂತ್ಯವಾಯಿತು. ಆರಂಭದಿಂದಲೂ ಉತ್ತಮ ಸರ್ವ್‌ಗಳನ್ನು ಮಾಡುವ ಮೂಲಕ ಮಾಜಿ ವಿಶ್ವ ಚಾಂಪಿಯನ್ ಶಿಕ್ಸಿಯಾನ್‌ರನ್ನು ಕಂಗೆಡಿಸಿದ ಸಿಂಧು, ಕೊನೆಗೆ ಜಯದ ಮಾಲೆಯನ್ನು ಧರಿಸಿದ್ದಾರೆ. ಈ ಮೂಲಕ ಸರಣಿಯಲ್ಲಿ ಭಾರತದ ಪದಕದ ಆಸೆ ಇಮ್ಮಡಿಯಾಗಿದೆ.
1983ರಲ್ಲಿ ಕೊನೆಯ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪ್ರಕಾಶ್ ಪಡುಕೋಣೆ ಅವರು ಕಂಚಿನ ಪದಕ ಗೆದ್ದಿದ್ದರು. ಇದನ್ನು ಹೊರತು ಪಡಿಸಿದರೆ 2011ರಲ್ಲಿ ಲಂಡನ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಜ್ವಾಲಾಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಅವರು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದಿದ್ದರು. ಇದೀಗ ಮತ್ತೆ ಪದಕ ಪಡೆಯುವ ಭಾರತದ ಆಸೆ ಸಿಂಧು ಅವರ ಮೂಲಕ ಸಾಕಾರಗೊಳ್ಳುವ ಹಂತದಲ್ಲಿದೆ.