ಆಂಟನಿ ಹೇಳಿಕೆಯಿಂದ ಭರಿಸಲಾಗದ ನಷ್ಟ: ಅಡ್ವಾಣಿ
ಸೈನಿಕರ ಹತ್ಯೆ ಕುರಿತು ಆಂಟನಿ ನೀಡಿದ್ದ ಹೇಳಿಕೆ ಸರ್ಕಾರದ ಗೌರವಕ್ಕೆ ಭರಿಸಲಾಗದ ನಷ್ಟ ಮಾಡಿದೆ ಎಂದು ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.
ನವದೆಹಲಿ: ಭಾರತೀಯ ಸೈನಿಕರ ಹತ್ಯೆ ಕುರಿತು ರಕ್ಷಣಾ ಸಚಿವ ಆಂಟನಿ ನೀಡಿದ್ದ ಹೇಳಿಕೆಯಿಂದಾಗಿ ಸರ್ಕಾರದ ಗೌರವಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಎಲ್.ಕೆ.ಅಡ್ವಾಣಿ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 'ತೆಲಂಗಾಣ ವಿಚಾರವನ್ನು ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿಲ್ಲ. ಅಲ್ಲದೆ ಅಡಳಿತ ಪಕ್ಷದ ಸದಸ್ಯರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಗದ್ದಲ ಸೃಷ್ಟಿ ಮಾಡುತ್ತಿದ್ದಾರೆ. ಹೀಗಾಗಿಯೇ ಇದುವರೆಗಿನ ಕಲಾಪ ಸಂಪೂರ್ಣ ಬರಡಾಗಿತ್ತು' ಎಂದು ಅವರು ಹೇಳಿದ್ದಾರೆ.
'ತೆಲಂಗಾಣ ವಿಚಾರವನ್ನು ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿಲ್ಲ. ತೆಲಂಗಾಣ ವಿಚಾರದಿಂದಾಗಿ ಇದುವರೆವಿಗೂ ಕಲಾಪ ಸುಗಮವಾಗಿ ನಡೆದಿಲ್ಲ. ಮತ್ತೋಂದು ಗಂಭೀರ ದುರಂತವೆಂದರೆ ಐವರು ಭಾರತೀಯ ಯೋಧರ ಹತ್ಯೆ ಕುರಿತು ರಕ್ಷಣಾ ಸಚಿವರು ನೀಡಿದ್ದ ಹೇಳಿಕೆ. ಸಚಿವರ ಹೇಳಿಕೆಯಿಂದಾಗಿ ಸರ್ಕಾರದ ಗೌರವಕ್ಕೆ ತೀರದ ಧಕ್ಕೆ ಉಂಟಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಆಂಟನಿ ಅವರಿಂದ ಇಂತಹ ವರ್ತನೆ ನಿರೀಕ್ಷಿಸಿರಲಿಲ್ಲ. ಅವರು ನೀಡಿದ್ದ ಹೇಳಿಕೆಯಿಂದ ಸದನದ ಸದಸ್ಯರೆಲ್ಲರೂ ಅತೃಪ್ತರಾಗಿದ್ದು, ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ಬಳಿಕ ಸಚಿವರ ತಮ್ಮ ಹೇಳಿಕೆಯನ್ನು ಬದಲಿಸಿ ಪ್ರತ್ಯೇಕ ಹೇಳಿಕೆ ನೀಡಿದ್ದರು. ಇದರಿಂದ ಸರ್ಕಾರದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಅಡ್ವಾಣಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ತೆಲಂಗಾಣ ವಿವಾದ ಮತ್ತು ಪಾಕ್ ಯೋಧರ ಕದನ ವಿರಾಮ ಉಲ್ಲಂಘನೆಯಿಂದಾಗಿ ಕಳೆದ ವಾರ ನಡೆದ ಕಲಾಪ ಬಹುತೇಕ ಗದ್ದಲದಿಂದಲೇ ಕೂಡಿತ್ತು. ಅದರಲ್ಲಿಯೂ ಭಾರತೀಯ ಯೋಧರ ಹತ್ಯೆ ಕುರಿತು ರಕ್ಷಣಾ ಸಚಿವ ಎ.ಕೆ.ಆಂಟನಿ ನೀಡಿದ್ದ ಹೇಳಿಕೆಯಿಂದಾಗಿ ಆಕ್ರೋಶಗೊಂಡಿದ್ದ ಪ್ರತಿಪಕ್ಷಗಳು ಉಭಯ ಸದನದಲ್ಲಿ ತೀವ್ರ ಕೋಲಾಹಲವನ್ನೇ ಸೃಷ್ಟಿಮಾಡಿದ್ದವು. ನಂತರವಷ್ಟೇ ಸಚಿವರ ತಮ್ಮ ಹೇಳಿಕೆಯನ್ನು ಬದಲಿಸಿದ್ದರು.