ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಯುಪಿಎಗೆ ದೇವರು ಒಳ್ಳೆ ಬುದ್ದಿ ಕೊಡಲಿ: ನರೇಂದ್ರ ಮೋದಿ

ಯುಪಿಎ ಸರ್ಕಾರಕ್ಕೆ ದೇವರು ಒಳ್ಳೆ ಬುದ್ದಿ ನೀಡಲಿ ಎಂದು ಭಾನುವಾರ ಹೈದರಾಬಾದಿನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದರು.

Srinivasa Murthy VN
Updated On : 11 Aug 2013, 6:27 am

ಹೈದರಾಬಾದ್: ಕೇಂದ್ರದ ಯುಪಿಎ ಸರ್ಕಾರಕ್ಕೆ ದೇವರು ಒಳ್ಳೆ ಬುದ್ದಿ ನೀಡಲಿ ಎಂದು ಭಾನುವಾರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದರು.

ಹೈದರಾಬಾದಿನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ 'ನವಭಾರತ ಯುವಭೇರಿ' ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವಿಶೇಷವೆಂದರೆ ಮೋದಿ ಅವರ ಇಂದಿನ ಬೃಹತ್ ರ್ಯಾಲಿಯಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದು, ಕ್ರೀಂಡಾಗಣದಲ್ಲಿ ಸ್ಥಳಾವಕಾಶವಿಲ್ಲದಷ್ಟು ಜನ ಕಿಕ್ಕಿರಿದು ತುಂಬಿದ್ದಾರೆ. ಹೀಗಾಗಿಯೇ ಮೋದಿ ಅವರ ಭಾಷಣವನ್ನು ಹೈದರಾಬಾದಿನ ವಿವಿಧ ಸಿನಿಮಾ ಥಿಯೇಟರ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.

ಕ್ರೀಡಾಂಗಣದಲ್ಲಿ ತುಂಬಿದ್ದ ಜನರನ್ನು ಉದ್ದೇಶಿಸಿ ಮಾತಾನಾಡಿದ ನರೇಂದ್ರ ಮೋದಿ ಅವರು ತೆಲುಗು ಭಾಷೆಯಲ್ಲಿ ತಮ್ಮ ಭಾಷಣವನ್ನು ಆರಂಭಿಸಿದರು. ತೆಲುಗಿನಲ್ಲಿ ನಮಸ್ಕಾರ ಹೇಳಿದ ಮೋದಿ, 'ಆಂಧ್ರ ಪ್ರದೇಶ ವಿಮೋಚನೆಯಾದ ದಿನವೇ ತಮ್ಮ ಜನ್ಮದಿನವಾದದ್ದು ತಮ್ಮ ಭಾಗ್ಯ. ಸೆಪ್ಟೆಂಬರ್ 17ರಂದು ಹೈದರಾಬಾದ್ ವಿಮೋಚನೆಯಾದದ್ದು. ಹೈದರಾಬಾದ್ ರ್ಯಾಲಿಯನ್ನು ಅಭೂತಪೂರ್ವ ಯಶಸ್ವಿಗೊಳಿಸಿದ ಆಂಧ್ರಪ್ರದೇಶ ಯುವಕರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ನನ್ನ ಭಾಷಣ ಕೇಳಲು ಇಲ್ಲಿಗೆ ಆಗಮಿಸಿರುವ ಮತ್ತು ದೂರದರ್ಶನದಲ್ಲಿ ನನ್ನ ಮಾತುಗಳನ್ನು ಆಲಿಸುತ್ತಿರುವ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ'.

'ಕ್ರೀಡಾಂಗಣದಲ್ಲಿ ನಿಮಗೆ ಸ್ಥಳಾವಾಕಾಶವಿರದಿರಬಹುದು. ಆದರೆ ನಿಮಗಾಗಿ ನನ್ನ ಹೃದಯದಲ್ಲಿ ಸಾಕಷ್ಟು ಜಾಗವಿದೆ. ಆದರೆ ದೆಹಲಿಯಲ್ಲಿ ಕುಳಿತಿರುವ ಮಂದಿಗೆ ಮಾತ್ರ ದೇವರು ಒಳ್ಳೆಯ ಬುದ್ದಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಆಂಧ್ರ ವಿಭಜನೆ ಹೆಸರಲ್ಲಿ ಕೇಂದ್ರ ಸರ್ಕಾರ ಜನರ ಮಧ್ಯೆ ಬೆಂಕಿ ಹಚ್ಚಿದೆ. ಆಂಧ್ರ ವಿಭಜನೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮೋಸ ಮಾಡುತ್ತಿದೆ. ಒಡೆದು ಆಳುವ ನೀತಿಯಲ್ಲಿಯೇ ಕಾಂಗ್ರೆಸ್ಗೆ ನಂಬಿಕೆ ಇದ್ದು, ಅದೇ ತತ್ವವನ್ನು ಅದು ಎಲ್ಲ ರಾಜ್ಯಗಳಲ್ಲಿಯೂ ಅನುಸರಿಸುತ್ತಿದೆ. ಮೊದಲಿನಿಂದಲೂ ಬಿಜೆಪಿಗೆ ತೆಲಂಗಾಣ ರಾಜ್ಯ ರಚಿಸುವ ಆಸೆ ಇತ್ತು. ಸಣ್ಣ ರಾಜ್ಯಗಳ ರಚನೆಯಲ್ಲಿಯೇ ಬಿಜೆಪಿಗೆ ನಂಬಿಕೆ ಇದ್ದು, ಸೀಮಾಂಧ್ರ ಮತ್ತು ತೆಲಂಗಾಣ ಜನರು ಸಹೋದರರಂತಿರಬೇಕು. ಗುಜರಾತ್ನಲ್ಲಿಯೂ ನಾಲ್ಕು ಲಕ್ಷ ತೆಲುಗು ಭಾಷಿಕರಿದ್ದಾರೆ. ಗುಜರಾತಿಗರು ಮತ್ತು ತೆಲುಗು ಭಾಷಿಕರು ವಿಶಾಲ ಹೃದಯಿಗಳು'.

ಭ್ರಷ್ಟಾಚಾರದಿಂದಾಗಿ ದೇಶದ ಅಭಿವೃದ್ಧಿ ಮೂಲೆಗುಂಪಾಗಿದೆ. ಅಟಲ್ ಆಡಳಿತದಲ್ಲಿ ಎಲ್ಲರಿಗೂ ರೊಟ್ಟಿ ಸಿಗುತ್ತಿತ್ತು. ಆಗ ಆಹಾರ ಭದ್ರತೆಯ ಅಗತ್ಯವೇ ಇರಲಿಲ್ಲ. ಈಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅನಿಯಮಿತ ಭ್ರಷ್ಟಾಚಾರದಿಂದಾಗಿ ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಿವೆ. ಬಡವರ ಕೈಗೆ ಅಕ್ಕಿ ಚಿನ್ನವಾಗಿದೆ. ಹೀಗಾಗಿಯೇ ಕಾಂಗ್ರೆಸ್ ಸರ್ಕಾರ ಆಹಾರ ಭದ್ರತಾ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಿದೆ. ವಿಶ್ವವಿಖ್ಯಾತ ವೈಧ್ಯರು ಆಂಧ್ರಪ್ರದೇಶದಲ್ಲಿದ್ದಾರೆ. ಇಲ್ಲಿನ ಔಷಧಿಗಳು ವಿದೇಶಗಳಿಗೆ ರಫ್ತಾಗುತ್ತಿವೆ. ಆದರೆ ಇಲ್ಲಿ ತಯಾರಾಗುತ್ತಿರುವ ಔಷಧಿಗಳನ್ನು ನೀಡಲು ಸೂಕ್ತ ವೈಧ್ಯರೇ ಇಲ್ಲ.

ಈ ರಾಜ್ಯದ ಯುವಕರು ತುಂಬಾ ಬುದ್ಧಿವಂತರಾಗಿದ್ದು, ತಮ್ಮ ಚಾಣಕ್ಯತೆಯಿಂದಾಗಿ ವಿಶ್ವದಾದ್ಯಂತ ಹೆಸರು ಮಾಡಿದ್ದಾರೆ. ಆದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಇದನ್ನು ಮನಗಂಡತ್ತಿಲ್ಲ. ಕನಿಷ್ಟ ಪಕ್ಷ ನೆರೆಯ ತಮಿಳುನಾಡು ರಾಜ್ಯವನ್ನು ನೋಡಿಯಾದರೂ ರಾಜ್ಯ ಸರ್ಕಾರ ಯವಕರಿಗೆ ಆಧ್ಯತೆ ನೀಡಬೇಕು. ಕಾಂಗ್ರೆಸ್ ಕುಟಿಲತೆಯನ್ನು ಅರಿತಿದ್ದ, ಎನ್ಟಿಆರ್ ಅವರು ಕಾಂಗ್ರೆಸ್ ಮುಕ್ತ ದೇಶದ ಮಂತ್ರವನ್ನು ಜಪಿಸುತ್ತಿದ್ದರು. ಕೇಂದ್ರದಲ್ಲಿ ಕಾಂಗ್ರೆಸ್ ವಿರೋಧಿ ಧೋರಣೆ ಸೃಷ್ಟಿಯಾಗಿದ್ದೇ ಎನ್ಟಿಆರ್ ಅವರಿಂದಾಗಿ. ಅವರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ.

ಕಾಂಗ್ರೆಸ್ಗೆ ದೇಶದ ಸೈನಿಕರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ದೇಶದ ಗಡಿ ರಕ್ಷಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ನಮ್ಮ ದೇಶದ ಗಡಿಯೊಳಗೆ ನುಗ್ಗಿ ಪಾಕಿಸ್ತಾನಿ ಸೈನಿಕರು ನಮ್ಮ ಯೋಧರನ್ನು ಹತ್ಯೆ ಮಾಡಿದರೂ ದೆಹಲಿಯಲ್ಲಿರುವ ಪ್ರಧಾನಿಗಳು ತುಟಿ ಬಿಚ್ಚುವುದಿಲ್ಲ. ಪಾಕಿಸ್ತಾನ ನಮ್ಮ ದೇಶದ ಯೋಧರನ್ನು ಕೋಲ್ಲುತ್ತಿದೆ.
ಆದರೂ ಇದಕ್ಕೆ ಪ್ರತ್ಯುತ್ತರ ನೀಡಲು ನಮ್ಮ 'ದೆಹಲಿ ಸರ್ಕಾರ' ವಿಫಲವಾಗಿದೆ. ಚೀನಾ ಕೂಡ ನಮ್ಮ ಗಡಿಯನ್ನು ಅತಿಕ್ರಮಿಸಿಕೊಂಡಿದೆ. ಆದರೂ ಕೇಂದ್ರ ಸರ್ಕಾರ ಪ್ರತ್ಯುತ್ತರ ನೀಡದೇ ಇರುವುದು ದೇಶದ ದೌರ್ಭಾಗ್ಯ. ಸತತ 30 ವರ್ಷಗಳಿಂದ ಗಡಿಯಲ್ಲಿ ನಡೆಯುತ್ತಿರುವ ಘರ್ಷಣೆಯನ್ನು ನಿಯಂತ್ರಿಸಲು ಕಾಂಗ್ರೆಸ್ನಿಂದ ಸಾಧ್ಯವಾಗುತ್ತಿಲ್ಲ.

ಭಾರತೀಯ ಮೀನುಗಾರರನ್ನು ಹತ್ಯೆಗೈದಿದ್ದ ಇಟಲಿ ಸೈನಿಕರಿಗೆ ಜಾಮೀನು ಹೇಗೆ ದೊರೆಯಿತು? ದೇಶದ ಗಡಿ ಮಾತ್ರವಲ್ಲದೆ ದೇಶದ ಆಂತರಿಕ ಭದ್ರತೆಯನ್ನು ನಿಭಾಯಿಸುವಲ್ಲಿಯೂ ಕಾಂಗ್ರೆಸ್ ವಿಫಲವಾಗಿದೆ. ಹೀಗಾಗಿಯೇ ಕಾಶ್ಮೀರದ ಕಿಶ್ತ್ವಾರ್ನಲ್ಲಿ ಘರ್ಷಣೆ ನಡೆಯುತ್ತಿದೆ. ಕಿಶ್ತ್ವಾರ್ನಲ್ಲಿ ಹಿಂಸಾಚಾರ ತಡೆಯುವಲ್ಲಿ ಒಮರ್ ಸರ್ಕಾರ ವಿಫಲವಾಗಿದೆ. ಅಲ್ಲಿನ ಸತ್ಯಾಂಶವನ್ನು ಮರೆಮಾಚಲು ಒಮರ್ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸತ್ಯಾಂಶವನ್ನು ಮುಚ್ಚಿಡಲು ಒಮರ್ ಸರ್ಕಾರ ಅಲ್ಲಿಗೆ ತೆರಳಿದ್ದ ಅರುಣ್ ಜೇಟ್ಲಿ ಅವರನ್ನು ವಿನಾಕಾರಣ ಬಂಧಿಸಿದ್ದಾರೆ.

ಕಾಂಗ್ರೆಸ್ನ ಇಂತಹ ಕುಟಿಲ ಬುದ್ಧಿಯಿಂದಾಗಿ ರಾಜಕೀಯ ಮತ್ತು ರಾಜಕಾರಣದ ಮೇಲೆ ಜನರಿಗೆ ನಂಬಿಕೆ ಕುಸಿಯುತ್ತಿದೆ ಎಂದು ಮೋದಿ ಕಿಡಿಕಾರಿದರು. ಒಟ್ಟಾರೆ ಹೈದರಾಬಾದಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮೋದಿ, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement