ರುಪಾಯಿ ಮೌಲ್ಯ ದಾಖಲೆ ಕುಸಿತ: ಚಿನ್ನದ ದರ ಗಗನಕ್ಕೆ
ರುಪಾಯಿ ಮೌಲ್ಯ ದಾಖಲೆ ಕುಸಿತ ಕಂಡಿದ್ದು, ಪ್ರತಿ ಡಾಲರ್ ಎದುರು 57 ಪೈಸೆಯಷ್ಟು ಕುಸಿತಗೊಂಡಿದೆ.
ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ದಾಖಲೆ ಕುಸಿತ ಕಂಡಿದ್ದು, ಪ್ರತಿ ಡಾಲರ್ ಎದುರು ರುಪಾಯಿ ಮೌಲ್ಯ 57 ಪೈಸೆಯಷ್ಟು ಕುಸಿತಗೊಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾಸಗಿ ಬ್ಯಾಂಕುಗಳು ಯುಎಸ್ ಡಾಲರ್ಗೆ ಹೆಚ್ಚು ಬೇಡಿಕೆ ಇಟ್ಟಿದ್ದರಿಂದ ರುಪಾಯಿ ಮೌಲ್ಯ ಸರ್ವಕಾಲಿಕ ದಾಖಲೆ ಕುಸಿತಗೊಂಡಿದೆ. ನಿನ್ನೆ ಮಾರುಕಟ್ಟೆ ಕೊನೆಗೊಂಡಾಗ ರುಪಾಯಿ ಮೌಲ್ಯ ಡಾಲರ್ಗೆ 61.35ನಷ್ಟಿತ್ತು. ಇಂದು ಬೆಳ್ಳಗ್ಗೆ ಮತ್ತೆ ಮಾರುಕಟ್ಟೆ ಆರಂಭವಾದಾಗ ರುಪಾಯಿ ಅಲ್ಪ ಕುಸಿತಗೊಳ್ಳುವ ಮೂಲಕ 61.43ಕ್ಕೆ ಸ್ಥಿರವಾಗಿತ್ತು. ಆದರೆ ಇಂದು ಮಧ್ಯಾಹ್ನ ಮಾರುಕಟ್ಟೆ ಆರಂಭವಾದಾಗ ರುಪಾಯಿ ಬೆಲೆ 57 ಪೈಸೆಯಷ್ಟು ಕುಸಿತಗೊಂಡು ಪ್ರತಿ ಡಾಲರ್ ಬೆಲೆ 62ಕ್ಕೇರಿದೆ.
ಮಾರುಕಟ್ಟೆ ಆರಂಭವಾದಾಗ ಖಾಸಗಿ ಬ್ಯಾಂಕುಗಳು ಯುಎಸ್ ಡಾಲರ್ಗೆ ಹೆಚ್ಚಿನ ಬೇಡಿಕೆ ಇಟ್ಟಾಗ ಮತ್ತೆ ರುಪಾಯಿ ಮೌಲ್ಯ ದಾಖಲೆ ಕುಸಿತಗೊಂಡಿದೆ. ಅಲ್ಲದೆ ಷೇರುಮಾರಕಟ್ಟೆಯ ನಿಫ್ಟಿಯಲ್ಲಿ ಕೂಡ 769.41 ಅಂಕಗಳನ್ನು ಕಳೆದುಕೊಂಡಿದ್ದು, ರುಪಾಯಿ ಮೌಲ್ಯ ಕುಸಿತಗೊಳ್ಳಲು ಮತ್ತೊಂದು ಕಾರಣ ಎನ್ನಲಾಗುತ್ತಿದೆ.
ಗಗನಗಕ್ಕೇರಿದ ಚಿನ್ನದ ಬೆಲೆ
ಇತ್ತ ರುಪಾಯಿ ಮೌಲ್ಯ ದಾಖಲೆ ಕುಸಿತ ಕಾಣುತ್ತಲೇ ಅತ್ತ ಚಿನ್ನದ ದರ ಮತ್ತೆ ಗಗನಕ್ಕೇರಿದೆ. ನಿನ್ನೆ 30 ಸಾವಿರ ರುಪಾಯಿ ಗಡಿಯಲ್ಲಿದ್ದ ಚಿನ್ನದ ದರ, ಇಂದು ಏಕಾಏಕಿ ಒಂದು ಸಾವಿರದ ತೊಂಬತ್ತು ರುಪಾಯಿ ಏರಿಕೆ ಕಂಡಿದ್ದು, 24 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ 30,285 ರುಪಾಯಿಗಳಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಕುಸಿಯಿತ್ತಿರುವುದರಿಂದ ಹೂಡಿಕೆದಾರರು ಯಥೇಚ್ಛವಾಗಿ ಚಿನ್ನ ಖರೀದಿಸಲು ಮುಂದಾಗಿದ್ದರಿಂದಲೇ ಚಿನ್ನದ ದರ ಏರಿಕೆಯಾಗಲು ಕಾರಣ ಎನ್ನಲಾಗುತ್ತಿದೆ.