ದೆಹಲಿ ಕಾಮನ್ವೆಲ್ತ್ ಸ್ಫೋಟಕ್ಕೆ ತುಂಡಾ ಸಂಚು
ಉಗ್ರ ತುಂಡಾ, 2010ರ ಕಾಮನ್ವೆಲ್ತ್ ಕ್ರೀಡಾಕೂಟದ ವೇಳೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂಬ ಸ್ಫೋಟಕ ಮಾಹಿತಿ ವಿಚಾರಣೆ ವೇಳೆ ಹೊರಬಿದ್ದಿದೆ.
ನವದೆಹಲಿ: ದೆಹಲಿ ಪೊಲೀಸರಿಂದ ಬಂಧನಕ್ಕೀಡಾಗಿರುವ ಉಗ್ರ ಸೈಯ್ಯದ್ ಅಬ್ದುಲ್ ಕರೀಂ ಅಲಿಯಾಸ್ ತುಂಡಾ, 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ವೇಳೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂಬ ಸ್ಫೋಟಕ ಮಾಹಿತಿ ವಿಚಾರಣೆ ವೇಳೆ ಹೊರಬಿದ್ದಿದೆ.
ಇಂದು ಬೆಳಗ್ಗೆ ಭಾರತ-ನೇಪಾಳ ಗಡಿ ಉತ್ತರಾಖಂಡ್ ರಾಜ್ಯದ ಬನ್ಬಸಾ ಪ್ರಾಂತ್ಯದಲ್ಲಿ ತುಂಡಾನನ್ನು ಬಂಧಿಸಿದ್ದ ದೆಹಲಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು, ವಿಚಾರಣೆ ವೇಳೆ ತುಂಡಾ ಈ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾನೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದೆಹಲಿ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಎಸ್ಎನ್ ಶ್ರೀವಾತ್ಸವ್ ಅವರು, 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಾಂಬ್ ಸ್ಫೋಟ ನಡೆಸಲು ಹೊಂಚುಹಾಕಿದ್ದ ತುಂಡಾ, ಇದಕ್ಕಾಗಿ ಸ್ಕೆಚ್ ಕೂಡ ಹಾಕಿ ಸ್ಪೋಟ ನಡೆಸಲು ಉಗ್ರರನ್ನು ಸಿದ್ಧಪಡಿಸಿದ್ದನು. ಆದರೆ ಈ ವೇಳೆ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಈತನ ಸಹಚರರನ್ನು ಬಂಧಿಸಿದ್ದರು. ಹೀಗಾಗಿ ತುಂಡಾ ಸ್ಫೋಟ ಸಂಚು ವಿಫಲಗೊಂಡಿತ್ತು ಎಂದು ಹೇಳಿದರು.
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟನಾಗಿದ್ದ ತುಂಡಾ, ಎಲ್ಇಟಿ ಸಂಘಟನೆಯಲ್ಲಿ ಬಾಂಬ್ಗಳನ್ನು ಸಿದ್ಧಪಡಿಸುವುದರಲ್ಲಿ ಪರಿಣಿತನಾಗಿದ್ದ. ಸುಮಾರು 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ತುಂಡಾ, 2001ರ ಸಂಸತ್ ಮೇಲಿನ ದಾಳಿ, 1996-98ರಲ್ಲಿ ಇಂಡೋ ನೇಪಾಳ ಗಡಿಯಲ್ಲಿ ನಡೆದ ಸರಣಿ ಸ್ಫೋಟ, 26/11 ಮುಂಬೈ ದಾಳಿ ಪ್ರಕರಣದ ಪ್ರಮುಖ ರೂವಾರಿ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಮಹಮದ್ ಸೈಯ್ಯದ್ನೊಂದಿಗೂ ಈತನಿಗೆ ನಂಟಿತ್ತು ಎಂದು ತಿಳಿದುಬಂದಿದೆ.
ಅಲ್ಲದೆ ದೆಹಲಿ, ಹರ್ಯಾಣ, ಪಂಜಾಬ್, ಹೈದರಾಬಾದ್, ಸೂರತ್ ಸೇರಿದಂತೆ ಉತ್ತರ ಭಾರತದಲ್ಲಿ ನಡೆದ ಪ್ರಮುಖ ಬಾಂಬ್ ಸ್ಫೋಟಗಳಲ್ಲಿ ಈತನ ಕೈವಾಡವಿದೆ ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ. ಇಂದು ಬಂಧನಕ್ಕೀಡಾಗಿದ್ದ ಉಗ್ರ ತುಂಡಾನನ್ನು ದೆಹಲಿ ಪೊಲೀಸರು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಈತನನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ. ತುಂಡಾನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ತುಂಡಾ ಬಳಿ ಪಾಕಿಸ್ತಾನ ಪಾಸ್ಪೋರ್ಟ್ ಪತ್ತೆ
ಬಂಧಿತ ಉಗ್ರ ಸೈಯ್ಯದ್ ಅಬ್ದುಲ್ ಕರೀಂ ಅಲಿಯಾಸ್ ತುಂಡಾನ ಬಂಧನ ವೇಳೆ ಈತನ ಬಳಿ ಪಾಕಿಸ್ತಾನದ ಪಾಸ್ಪೋರ್ಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಬಳಿ ಇದ್ದ ಪಾಸ್ಪೋರ್ಟ್ ಸಂಖ್ಯೆ ಎಸಿ 4413161 ಎಂದು ತಿಳಿದು ಬಂದಿದ್ದು, ಅಬ್ದುಲ್ ಖುದ್ದಾಸ್ ಎಂಬ ಹೆಸರಿನಲ್ಲಿ ಇದೇ ವರ್ಷದ ಜನವರಿ 23ರಂದು ಈತನಿಗೆ ರವಾನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಮೂಲಕ ಬಂಧಿತ ಉಗ್ರ ತುಂಡಾನೊಂದಿಗೆ ಪಾಕಿಸ್ತಾನ ನಂಟುಹೊಂದಿರುವುದು ಸಾಬೀತಾಗಿದೆ.