ಕಾಶ್ಮೀರದಲ್ಲಿ ಮತ್ತೆ ಉಗ್ರರ ಒಳನುಸುಳಿಕೆ: ತೀವ್ರ ಶೋಧ
ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೆ ಉಗ್ರರ ನುಸುಳಿಕೆ ಕಂಡುಬಂದಿದ್ದು, ಭಾರತೀಯ ಯೋಧರು ಒಳನುಸುಳಿರುವ ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೆ ಉಗ್ರರ ನುಸುಳಿಕೆ ಕಂಡುಬಂದಿದ್ದು, ಭಾರತೀಯ ಯೋಧರು ಒಳನುಸುಳಿರುವ ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಕಾಶ್ಮೀರದ ಕುಪ್ವಾರ ಜಿಲ್ಲೆಯ ಬಳಿ ಇರುವ ಗಡಿ ನಿಯಂತ್ರಣ ರೇಖೆಯನ್ನು ದಾಟಿದ ಉಗ್ರರು ಭಾರತೀಯ ಗಡಿಯನ್ನು ಪ್ರವೇಶಿಸಿದ್ದಾರೆ. ಕುಪ್ವಾರ ಜಿಲ್ಲೆಯ ಕೆರಣ್ ಸೆಕ್ಟರ್‌ನಲ್ಲಿ ಇಂದು ಮಧ್ಯರಾತ್ರಿ ಸುಮಾರು 2: 30ರ ವೇಳೆಯಲ್ಲಿ ಭಾರತೀಯ ಯೋಧರ ಕಣ್ಣುತಪ್ಪಿಸಿ ಉಗ್ರರ ತಂಡ ಒಳನುಸುಳಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಅಲ್ಲದೆ ಒಳನುಸುಳಿರುವ ಸುಮಾರು 200ರಿಂದ 250ಮಂದಿ ಉಗ್ರರು ಭಾರತೀಯ ಯೋಧರತ್ತ ತೀವ್ರ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಉಗ್ರರ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿರುವ ಭಾರತೀಯ ಯೋಧರು ಪ್ರತಿ ದಾಳಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೇನಾವಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವಂತೆ, 'ಉಗ್ರರ ತಂಡ ಇಂದು ಬೆಳಗ್ಗೆ ಸುಮಾರು 2: 30ರ ವೇಳೆಯಲ್ಲಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಗಡಿಯನ್ನು ಪ್ರವೇಶ ಮಾಡಿವೆ'.
'ಭಾರತೀಯ ಗಡಿ ಪ್ರವೇಶ ಮಾಡುತ್ತಿದ್ದಂತೆಯೇ ಯೋಧರತ್ತ ತೀವ್ರ ಗುಂಡಿನ ದಾಳಿ ಆರಂಭಿಸುತ್ತಿದ್ದಂತೆಯೇ ಭಾರತೀಯ ಯೋಧರು ಕೂಡ ಪ್ರತಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಯಾವುದೇ ಸಾವುನೋವಿನ ಕುರಿತು ಮಾಹಿತಿಗಳು ಲಭ್ಯವಾಗಿಲ್ಲ. ಯಾವುದೇ ಕಾರಣಕ್ಕೂ ಭಾರತೀಯ ಗಡಿ ಪ್ರವೇಶ ಮಾಡಿರುವ ಉಗ್ರರನ್ನು ಬಿಡುವುದಿಲ್ಲ. ಅವರನ್ನು ಪಾಕಿಸ್ತಾನ ಗಡಿಗೆ ಹಿಮ್ಮೆಟ್ಟಿಸುವುದೇ ನಮ್ಮ ಪ್ರಮುಖ ಕಾರ್ಯವಾಗಿದೆ' ಎಂದು ಹೇಳಿದ್ದಾರೆ.
ಪಾಕಿಸ್ತಾನ ಸೈನಿಕರು ಕಳೆದ ಒಂದು ತಿಂಗಳಿಂದ ಸತತವಾಗಿ ಕದನ ವಿರಾಮವನ್ನು ಉಲ್ಲಂಘಿಸಿ ಭಾರತೀಯ ಯೋಧರತ್ತ ತೀವ್ರ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಇದೀಗ ಪಾಕಿಸ್ತಾನಿ ಉಗ್ರರು ಕೂಡ ಪಾಕ್ ಸೇನೆಯೊಂದಿಗೆ ಕೈ ಜೋಡಿಸಿ ಭಾರತೀಯ ಗಡಿಯನ್ನು ಪ್ರವೇಶಿಸಲು ವಿಫಲ ಪ್ರಯತ್ನ ಮಾಡುತ್ತಿದ್ದಾರೆ.