ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿದ 'ಚೆನ್ನೈ ಎಕ್ಸ್‌ಪ್ರೆಸ್'
ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಚೆನ್ನೈ ಎಕ್ಸ್‌ಪ್ರೆಸ್' ಚಲನಚಿತ್ರ ಬಾಕ್ಸ್‌ಆಫೀಸ್ ನಲ್ಲಿ ನೂತನ ದಾಖಲೆ ಬರೆದಿದೆ.
ಮುಂಬೈ: ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಚೆನ್ನೈ ಎಕ್ಸ್‌ಪ್ರೆಸ್' ಚಲನಚಿತ್ರ ಬಾಕ್ಸ್‌ಆಫೀಸ್ ನಲ್ಲಿ ನೂತನ ದಾಖಲೆ ಬರೆದಿದೆ.
ಶಾರುಖ್ ಖಾನ್ ನಟಿಸಿದ್ದ ಈ ಹಿಂದಿನ ಎರಡು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿತ್ತು. ಶಾರುಖ್ ಖಾನ್ ನಿರ್ಮಾಣದ ರಾಒನ್ ಮತ್ತು ಯಶ್ ಚೋಪ್ರಾ ನಿರ್ದೇಶನದ ಜಬ್ ತಕ್ ಹೈ ಜಾನ್ ಚಿತ್ರಗಳು ನೂರು ಕೋಟಿಗಳಿಸುವಲ್ಲಿ ವಿಫಲವಾಗಿದ್ದವು. ಆದರೆ ಇತ್ತೀಚೆಗೆ ತೆರೆಕಂಡ 'ಚೆನ್ನೈ ಎಕ್ಸ್‌ಪ್ರೆಸ್' ಗಳಿಕೆಯಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದೆ. ವೇಗವಾಗಿ 100 ಕೋಟಿ ಗಳಿಸಿದ ಬಾಲಿವುಡ್ ಚಿತ್ರಗಳ ಪಟ್ಟಿಯಲ್ಲಿ 'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರ ಮೊದಲ ಸ್ಥಾನಗಳಿಸಿದೆ.
ತೆರೆಕಂಡ 2ನೇ ವಾರದ ಅಂತ್ಯಕ್ಕೆ 'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರ ಸುಮಾರು 171.71 ಕೋಟಿ ರು.ಗಳನ್ನು ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಬಗ್ಗೆ ಟ್ವೀಟರ್ ನಲ್ಲಿ ಮಾಹಿತಿಗಳು ಹರಿದಾಡುತ್ತಿದ್ದು, ಮೊದಲ ವಾರ 'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರ ವಿಶ್ವಾದ್ಯಂತ ಸುಮಾರು 156.70 ಕೋಟಿ ರು.ಗಳನ್ನು ಗಳಿಸಿದೆ. ಅಂತೆಯೇ ಎರಡನೇ ವಾರ 6.5 ಕೋಟಿ ಮತ್ತು ಅದೇ ವಾರದ ಅಂತ್ಯದಲ್ಲಿ 8.51 ಕೋಟಿ ರು.ಗಳನ್ನು ಗಳಿಸಿದೆ. ಈ ಮೂಲಕ ತೆರೆಕಂಡ ಮೂರು ವಾರಗಳಲ್ಲಿ ಅತ್ಯಧಿಕ ಹಣ ಗಳಿಕೆ ಮಾಡಿದ ಚಿತ್ರವೆಂಬ ಖ್ಯಾತಿ ಗಳಿಸಿದೆ.
ಚಿತ್ರೋದ್ಯಮದ ತಜ್ಞರ ಪ್ರಕಾರ 'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರ 3ನೇ ವಾರದಲ್ಲಿಯೇ 200 ಕೋಟಿ ರು.ಗಳನ್ನು ಗಳಿಸುವ ಮೂಲಕ ಮತ್ತೊಂದು ದಾಖಲೆ ಬರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.