ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಿಂಧೂ ರಕ್ಷಕ್ ದುರಂತ: 6ನೇ ಮೃತ ದೇಹ ಪತ್ತೆ

ಸಿಂಧೂ ರಕ್ಷಕ್ ನೌಕೆಯಲ್ಲಿ ನಡೆಯುತ್ತಿರುವ ಶೋಧಕಾರ್ಯದ ವೇಳೆ ಭಾನುವಾರ 6ನೇ ಯೋಧನ ಮೃತ ದೇಹ ಪತ್ತೆಯಾಗಿದೆ.

Srinivasa Murthy VN
Updated On : 18 Aug 2013, 5:49 am

ಮುಂಬೈ: ಇತ್ತೀಚೆಗೆ ದುರಂತಕ್ಕೀಡಾದ ಸಿಂಧೂ ರಕ್ಷಕ್ ಸಬ್ ಮರೀನ್ ನೌಕೆಯಲ್ಲಿ ನಡೆಯುತ್ತಿರುವ ಶೋಧಕಾರ್ಯದ ವೇಳೆ ಭಾನುವಾರ 6ನೇ ಯೋಧನ ಮೃತ ದೇಹ ಪತ್ತೆಯಾಗಿದೆ.

ಕಳೆದು ಬುಧವಾರ ಮುಂಬೈನ ಹೊರವಲಯದಲ್ಲಿ ನಡೆದ ಸಿಂಧೂ ರಕ್ಷಕ್ ಸಬ್ ಮರೀನ್ ನೌಕಾದುರಂತದಲ್ಲಿ ಕಣ್ಮರೆಯಾಗಿದ್ದ 18 ಯೋಧರ ಪೈಕಿ ಈವರೆಗೂ 6 ಮಂದಿ ಯೋಧರ ಶವಗಳು ಪತ್ತೆಯಾಗಿವೆ. ನೌಕೆಯಲ್ಲಿ ಶೋಧಕಾರ್ಯ ನಡೆಸುತ್ತಿರುವ ಭಾರತೀಯ ನೌಕಾದಳದ ಸಿಬ್ಬಂದಿಗೆ ರಷ್ಯಾ ಸೇನೆಯ ನುರಿತ ನೌಕಾದಳದ ತಜ್ಞರು ಸಹಾಯ ಮಾಡುತ್ತಿದ್ದು, ಭಾನುವಾರ ನಡೆದ ಶೋಧ ಕಾರ್ಯದ ವೇಳೆ 6ನೇ ಮೃತದೇಹ ಪತ್ತೆಯಾಗಿದೆ.

ಸಿಂಧೂರಕ್ಷಕ್ ನ ಎರಡನೇ ದ್ವಾರದ ಬಾಗಿಲನ್ನು ತೆರೆಯುವಲ್ಲಿ ನಿನ್ನೆ ನೌಕಾದಳದ ಸಿಬ್ಬಂದಿ ಯಶಸ್ವಿಯಾಗಿದ್ದರು. ಈ ನಡುವೆ ಇಂದು ನೌಕೆಯಲ್ಲಿ 6ನೇ ಶವಪತ್ತೆಯಾಗಿದ್ದು, ಶಸ್ತ್ರಾಸ್ತ್ರ ಸ್ಫೋಟದಿಂದಾಗಿ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗುತ್ತಿದೆ. ಅಲ್ಲದೆ ಮೃತಪಟ್ಟ ಯೋಧನ ಮೂಲವನ್ನು ನೌಕಾದಳ ರಹಸ್ಯವಾಗಿಟ್ಟಿದ್ದು, ಈತ ಭಾರತೀಯ ನೌಕಾದಳದಲ್ಲಿ ಶಸ್ತ್ರಾಸ್ತ್ರ ತಜ್ಞನಾಗಿದ್ದನು ಎಂದು ತಿಳಿದು ಬಂದಿದೆ.

ಸಾಮಾನ್ಯವಾಗಿ ಸಬ್‌ಮರೀನ್‌ಗಳಿಗೆ ರಾತ್ರಿ ವೇಳೆಯಲ್ಲಿ ಶಸ್ತ್ರಾಸ್ತ್ರಗಳನ್ನು ಲೋಡ್ ಮಾಡುತ್ತಾರೆ. ಮೂಲಗಳ ಪ್ರಕಾರ ಸಿಂಧೂರಕ್ಷಕ್ ಸಬ್ ಮರೀನ್ ಗೆ ಕೂಡ ಕಳೆದ ವಾರ ಶಸ್ತ್ರಾಸ್ತ್ರಗಳನ್ನು ತುಂಬಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಹೀಗಾಗಿ ಶಸ್ತ್ರಾಸ್ತ್ರಗಳನ್ನು ತುಂಬುವಾಗ ನೌಕೆಯಲ್ಲಿ ಉಂಟಾದ ಒತ್ತಡದಿಂದಾಗಿ ನೌಕೆ ಸ್ಫೋಟಗೊಂಡಿರಬಹುದು ಎಂದು ತಜ್ಞರು ಶಂಕೆವ್ಯಕ್ತಪಡಿಸುತ್ತಿದ್ದಾರೆ.

ಇದೀಗ ನೌಕಾ ಸ್ಫೋಟದ ಕುರಿತು ತನಿಖೆ ನಡೆಸುತ್ತಿರುವ ಭಾರತೀಯ ನೌಕಾದಳಕ್ಕೆ ರಷ್ಯಾ ಸೇನೆ ಸಹಾಯ ಮಾಡಲಿದೆ ಎಂದು ರಷ್ಯಾ ಉಪಾಧ್ಯಕ್ಷ ಡಿಮಿಟ್ರಿ ರೊಗೊಜಿನ್ ಅವರು ಆಶ್ವಾಸನೆ ನೀಡಿದ್ದಾರೆ. ಒಟ್ಟಾರೆ ದುರಂತಕ್ಕೀಡಾದ ಸಿಂಧೂ ರಕ್ಷಕ್ ನೌಕೆಯ ಶೋಧ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement