'ಹೆಡ್ಲಿ' ಮಾಹಿತಿ ವಿನಿಮಯಕ್ಕೆ ಎಫ್ ಬಿಐ ಅಸಮ್ಮತಿ
ಉಗ್ರ ಡೇವಿಡ್ ಹೆಡ್ಲಿಯ ವಿಚಾರಣೆಯ ಮಾಹಿತಿಯನ್ನು ಸಿಬಿಐ ಯೊಂದಿಗೆ ವಿನಿಮಯ ಮಾಡಿಕೊಳ್ಳಲು ಅಮೆರಿಕದ ತನಿಖಾ ಸಂಸ್ಥೆ ಎಫ್ ಬಿಐ ನಿರಾಕರಿಸಿದೆ.
ನವದೆಹಲಿ: 26/11 ಮುಂಬೈ ದಾಳಿ ಪ್ರಮುಖ ರೂವಾರಿ ಉಗ್ರ ಡೇವಿಡ್ ಹೆಡ್ಲಿಯ ವಿಚಾರಣೆಯ ಮಾಹಿತಿಯನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯೊಂದಿಗೆ ವಿನಿಮಯ ಮಾಡಿಕೊಳ್ಳಲು ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ ನಿರಾಕರಿಸಿದೆ.
ಪ್ರಸ್ತುತ ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಹೆಡ್ಲಿ ಮತ್ತು ಇಶ್ರತ್ ಜಹಾನ್ ನಡುವಿನ ಸಂಬಂಧದ ಕುರಿತು ಮಾಹಿತಿ ಪಡೆಯಲು ಮುಂದಾಗಿದ್ದರು. ಇದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಮನವಿ ಸಲ್ಲಿಸಿದ್ದ ಸಿಬಿಐ ಅಧಿಕಾರಿಗಳು ಮಾಹಿತಿ ಬಯಸಿದ್ದರು. ಆದರೆ ಈ ಬಗ್ಗೆ ಸಿಬಿಐಗೆ ಮಾಹಿತಿ ನೀಡಲು ಎನ್ಐಎ ನಿರಾಕರಿಸಿದ್ದು, ಹೆಡ್ಲಿಯನ್ನು ವಶಕ್ಕೆ ಪಡೆದುಕೊಂಡಿರುವ ಎಫ್ಬಿಐ ಅಧಿಕಾರಿಗಳು ವಿಚಾರಣೆಯ ಮಾಹಿತಿಯನ್ನು ಹಂಚಿಕೊಳ್ಳಲು ಕೆಲವು ಷರತ್ತು ವಿಧಿಸಿದೆ ಎಂದು ತಿಳಿದು ಬಂದಿದೆ.
ಅವುಗಳಲ್ಲಿ ಎಫ್ಬಿಐ ನೀಡುವ ಮಾಹಿತಿಯನ್ನು ಎನ್ಐಎ ಯಾವುದೇ ಕಾರಣಕ್ಕೂ ಇತರರೊಂದಿಗೆ ಹಂಚಿಕೊಳ್ಳಬಾರದು ಎಂಬ ಷರತ್ತು ಕೂಡ ಸೇರಿದೆ. ಹೀಗಾಗಿ ಎನ್ಐಎ ಮತ್ತು ಎಫ್ಬಿಐ ಅಧಿಕಾರಿಗಳು ಹೆಡ್ಲಿ ವಿಚಾರಣೆಯ ಮಾಹಿತಿಯನ್ನು ಸಿಬಿಐ ಸಂಸ್ಥೆಯೊಂದಿಗೆ ಹಂಚಿಕೊಳ್ಳಲು ನಿರಾಕರಿಸಿದ್ದಾರೆ. ಒಂದು ವೇಳೆ ಎನ್ಐಎ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಂಡಿದ್ದೇ ಆದರೆ, ಆಗ ಅಮೆರಿಕದ ಎಫ್ಬಿಐ ಸಂಸ್ಥೆ ಭವಿಷ್ಯದಲ್ಲಿ ಮತ್ತೆ ತನ್ನ ತನಿಖಾ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಹೀಗಾಗಿ ಎನ್ಐಎ ಹೆಡ್ಲಿ ಕುರಿತ ಮಾಹಿತಿಯನ್ನು ಸಿಬಿಐಯೊಂದಿಗೆ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದೆ.
ಈ ಬಗ್ಗೆ ಸಿಬಿಐ ಅಧಿಕಾರಿಗಳಿಗೆ ಪತ್ರ ಬರೆದಿರುವ ಎನ್ಐಎ, ಹೆಡ್ಲಿಯ ವಿಚಾರಣಾ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಎನ್ಐಎ ನಿಲುವಿನಿಂದ ಸಿಬಿಐ ತನಿಖೆಗೆ ಹಿನ್ನಡೆಯಾಗಿದ್ದು, ಮಹಿಳಾ ಉಗ್ರಗಾಮಿ ಎಂದು ಆರೋಪಿಸಿ ಎನ್ಕೌಂಟರ್ಗೆ ಗುರಿಯಾದ ಇಶ್ರತ್ ಜಹಾನ್ ಮತ್ತು ಇತರೆ ನಾಲ್ಕು ಮಂದಿ ಹಾಗೂ ಉಗ್ರ ಡೇವಿಡ್ ಹೆಡ್ಲಿ ನಡುವಿನ ಸಂಬಂಧವನ್ನು ಅರಿಯಲು ಸಾಧ್ಯವಾಗುತ್ತಿಲ್ಲ.