ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದೆಹಲಿಯಲ್ಲಿ ಶೇ.65ರಷ್ಟು ದಾಖಲೆ ಮತದಾನ

ದೆಹಲಿ ವಿಧಾನಸಭೆಗೆ ಇಂದು ನಡೆದ ಚುನಾವಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದ್ದು, ಸಂಜೆ ವೇಳೆಗೆ ಶೇ.65ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

Srinivasa Murthy VN
Updated On : 4 Dec 2013, 6:45 am

ನವದೆಹಲಿ: ದೆಹಲಿ ವಿಧಾನಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದ್ದು, ಮತದಾನದ ಅಂತ್ಯದ ವೇಳೆಗೆ ಶೇ.65ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗುತ್ತಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದ್ದು, ಸಂಜೆ ವೇಳೆಗೆ ದೆಹಲಿಯಾದ್ಯಂತ ಶೇ.65ರಷ್ಟು ಮತದಾನವಾಗಿದೆ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ನಡೆಸಿದ ಸತ್ಯಾಗ್ರಹದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದ್ದು, ಅಣ್ಣಾ ಸತ್ಯಾಗ್ರಹ ಮೂಲಕವೇ ಬೆಳಕಿಗೆ ಬಂದಿದ್ದ ಅರವಿಂದ್ ಕೇಜ್ರಿವಾಲ್ ಅವರು ಕೂಡ ಪ್ರಸಕ್ತ ಚುನಾವಣೆಯಲ್ಲಿ ತಮ್ಮ ಆಮ್ ಆದ್ಮಿ ಪಕ್ಷವನ್ನು ಪ್ರತಿನಿಧಿಸಿದ್ದಾರೆ.

ಭ್ರಷ್ಟಾಚಾರವನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡಿರುವ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಅವರು, ಪ್ರಮುಖ ಪಕ್ಷಗಳಾದ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಭಾರಿ ಸ್ಪರ್ಧೆ ಒಡ್ಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇಂದು ನಡೆದ ಮತದಾನವೂ ಕೂಡ ದಾಖಲೆಯ ಪುಟ ಸೇರಿದ್ದು, ಕಳೆದ 10 ವರ್ಷಗಳಲ್ಲಿಯೇ ಇಷ್ಟು ಪ್ರಮಾಣದಲ್ಲಿ ಮತದಾನವಾಗಿರಲಿಲ್ಲ ಎಂದು ಅಂಕಿ ಅಂಶಗಳು ದೃಢಪಡಿಸಿವೆ. 1993ರಲ್ಲಿ ದೆಹಲಿಯಲ್ಲಿ ಶೇ.61ರಷ್ಟು ಮತದಾನವಾಗಿತ್ತು. ಅದನ್ನು ಹೊರತು ಪಡಿಸಿದರೆ ಇಂದು ಅತ್ಯಧಿಕ ಪ್ರಮಾಣದಲ್ಲಿ ಮತದಾನವಾಗಿದೆ.

ಒಟ್ಟು 70 ಸ್ಥಾನಗಳನ್ನು ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 46 ಸ್ಥಾನಗಳ ಅವಶ್ಯಕತೆ ಇದೆ. ದೆಹಲಿಯಲ್ಲಿ ತ್ರಿಕೋನ ಸ್ಫರ್ಧೆ ಏರ್ಪಟ್ಟಿದ್ದು, ಸತತ 15 ವರ್ಷಗಳಿಂದ ಮುಖ್ಯಮಂತ್ರಿ ಸ್ಥಾನದಲ್ಲಿರುವ ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಅವರಿಗೆ ಪ್ರಸಕ್ತ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಂತೆಯೇ ಬಿಜೆಪಿಯ ಹರ್ಷವರ್ಧನ್ ಅವರಿಗೂ ಕೂಡ ಈ ಬಾರಿಯ ಚುನಾವಣೆ ಬಹುಮುಖ್ಯವಾಗಿದ್ದು, ಬಿಜೆಪಿಯನ್ನು ಅಧಿಕಾರದ ಗದ್ದುಗೆಗೇರಿಸಲು ಪ್ರಯತ್ನಿಸಿದ್ದಾರೆ.

ಅಂತೆಯೇ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರೀವಾಲ್ ಚುನಾವಣೆಯಲ್ಲಿ ಭಾರಿ ಪೈಪೋಟಿ ನೀಡಬಹುದು ಎಂದು ಅಂದಾಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement