ಲೈಂಗಿಕ ಕಿರುಕುಳ: ಅಸಾರಾಮ್ ಪುತ್ರನ ಬಂಧನ
ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಪುತ್ರ ನಾರಾಯಣ ಸಾಯಿಯನ್ನು ಕುರುಕ್ಷೇತ್ರದ ಬಳಿ ಬಂಧಿಸಲಾಗಿದೆ.
ಚಂಡೀಗಡ: ಆಶ್ರಮ ನಿವಾಸಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಪುತ್ರ ನಾರಾಯಣ ಸಾಯಿ ಅವರನ್ನು ಕುರುಕ್ಷೇತ್ರದ ಬಳಿ ಬಂಧಿಸಲಾಗಿದೆ.
ಲೈಂಗಿಕ ಕಿರುಕುಳ ಆರೋಪದ ಮೇಲೆ ಅಸಾರಾಮ್ ಬಾಪುರನ್ನು ಪೊಲೀಸರು ಬಂಧಿಸಿದ ದಿನದಿಂದಲೂ ನಾಪತ್ತೆಯಾಗಿದ್ದ ಅಸಾರಾಮ್ ಪುತ್ರ ನಾರಾಯಣ ಸಾಯಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದನು. ಸತತ 58 ದಿನಗಳ ಕಾಲ ತಲೆಮರೆಸಿಕೊಂಡಿದ್ದ ನಾರಾಯಣ ಸಾಯಿಯನ್ನು ಇಂದು ಹರ್ಯಾಣದ ಕುರುಕ್ಷೇತ್ರದಲ್ಲಿ ಬಂಧಿಸಲಾಗಿದೆ.
ಅಸಾರಾಮ್ ಪುತ್ರ ನಾರಾಯಣ ಸಾಯಿ ಹರ್ಯಾಣದಿಂದ ಪಂಜಾಬ್ಗೆ ಪರಾರಿಯಾಗಲು ಯತ್ನಿಸುತ್ತಿರುವ ಬಗೆಗೆ ಖಚಿತ ಮಾಹಿತಿ ಪಡೆದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ನಾರಾಯಣ ಸಾಯಿ ಸೇರಿದಂತೆ ಅವನ ನಾಲ್ವರು ಸಹಚರರನ್ನು ಬಂಧಿಸಿದ್ದಾರೆ. ಬಂಧಿತ ನಾಲ್ವರನ್ನು ಹನುಮಾನ್, ರಮೇಶ್, ವಿಷ್ಣು ಮತ್ತು ಭವಿಕಾ ಎಂದು ಗುರುತಿಸಲಾಗಿದೆ. ಈ ಪೈಕಿ ರಮೇಶ್ ನಾರಾಯಣ ಸಾಯಿಯ ಕಾರಿನ ಡ್ರೈವರ್ ಆಗಿದ್ದು, ಮತ್ತೊಬ್ಬ ಸಹಚರ ಹನುಮಾನ್ ಎಂಬಾತನ ಮೇಲೆಯೂ ಈ ಹಿಂದೆ ಎಫ್ಐಆರ್ ದಾಖಲಾಗಿತ್ತು.
ಬಂಧಿತರೆಲ್ಲರನ್ನೂ ಇಂದು ಮಧ್ಯಾಹ್ನ ಚಂಡೀಗಡ ರೋಹಿಣಿ ಕೋರ್ಟ್ ಮುಂದೆ ಹಾಜರು ಪಡಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಯಾದವ್ ಹೇಳಿದ್ದಾರೆ.