'ರಾಯಲ-ತೆಲಂಗಾಣ'ಕ್ಕೆ ಬ್ರೇಕ್ ಹಾಕಿದ ಕೇಂದ್ರ
ವಿರೋಧಕ್ಕೆ ಕಾರಣವಾಗಿದ್ದ ರಾಯಲ-ತೆಲಂಗಾಣ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದ್ದು, ತೆಲಂಗಾಣ ರಾಜ್ಯ ರಚನೆಗೆ ಒತ್ತು ನೀಡುವುದಾಗಿ ಹೇಳಿದೆ.
ನವದೆಹಲಿ: ತೆಲಂಗಾಣ ಮತ್ತು ರಾಯಲ ಸೀಮಾ ಪ್ರಾಂತ್ಯದ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ರಾಯಲ-ತೆಲಂಗಾಣ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದ್ದು, ಕೇವಲ ತೆಲಂಗಾಣ ರಾಜ್ಯ ರಚನೆಗೆ ಮಾತ್ರ ಒತ್ತು ನೀಡುವುದಾಗಿ ಹೇಳಿದೆ.
ಈ ಹಿಂದೆ ತೆಲಂಗಾಣ ರಾಜ್ಯರಚನೆ ಪ್ರಕ್ರಿಯೆಗಾಗಿ ಕೇಂದ್ರ ಸರ್ಕಾರ ರಚಿಸಿದ್ದ ಕೇಂದ್ರದ ಉನ್ನತ ಸಚಿವರ ತಂಡ, ತೆಲಂಗಾಣಕ್ಕೆ ರಾಯಲ ಸೀಮೆಯ 2 ಜಿಲ್ಲೆಗಳನ್ನು ಸೇರಿಸುವ ಕುರಿತು ಪ್ರಸ್ತಾವನೆ ಮುಂದಿಟ್ಟಿತ್ತು. ಈ ಬಗ್ಗೆ ಹಲವು ಬಾರಿ ಸಭೆ ನಡೆಸಿದ್ದ ಕೇಂದ್ರ ಸರ್ಕಾರ, ಆಂಧ್ರ ಪ್ರದೇಶವನ್ನು ಸಮವಾಗಿ 2 ಭಾಗಗಳಾಗಿ ಇಬ್ಭಾಗ ಮಾಡಲು ಮುಂದಾಗಿತ್ತು. ಅದರಂತೆ ಆಂಧ್ರ ಪ್ರದೇಶಕ್ಕೆ 12 ಜಿಲ್ಲೆ ಮತ್ತು ತೆಲಂಗಾಣ ರಾಜ್ಯಕ್ಕೆ 12 ಜಿಲ್ಲೆಗಳಾಗಿ ವಿಂಗಡಿಸಲು ಕೇಂದ್ರ ಮುಂದಾಗಿತ್ತು.
ಆದರೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಆರಂಭದಲ್ಲಿಯೇ ವಿರೋಧ ವ್ಯಕ್ತವಾಗಿತ್ತು. ಸ್ವತಃ ಕೇಂದ್ರದ ಉನ್ನತ ಸಚಿವರ ತಂಡದಲ್ಲಿನ ಕೆಲ ಸಚಿವರೇ ನೂತನ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ತೆಲಂಗಾಣ ಭಾಗದ ಜನಪ್ರತಿನಿಧಿಗಳು ಕೂಡ ನೂತನ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಇಂದು ಕೇಂದ್ರಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.