ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಲ್ಮಾನ್ 'ಹಿಟ್ ಅಂಡ್ ರನ್'': ಪುನರ್ ವಿಚಾರಣೆಗೆ ಕೋರ್ಟ್ ಆದೇಶ

2002ರಲ್ಲಿ ಮುಂಬೈನಲ್ಲಿ ನಡೆದಿದ್ದ ಹಿಟ್ ಅಂಡ್ ರನ್ ಪ್ರಕರಣದ ವಿಚಾರಣೆಯನ್ನು ಪುನಃ ಹೊಸದಾಗಿ..

Srinivasa Murthy VN
Updated On : 5 Dec 2013, 3:22 am

ಮುಂಬೈ: 2002ರಲ್ಲಿ ಮುಂಬೈನಲ್ಲಿ ನಡೆದಿದ್ದ ಹಿಟ್ ಅಂಡ್ ರನ್ ಪ್ರಕರಣದ ವಿಚಾರಣೆಯನ್ನು ಪುನಃ ಹೊಸದಾಗಿ ವಿಚಾರಣೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನದಲ್ಲಿರುವ ನಟ ಸಲ್ಮಾನ್ ಖಾನ್, ಈ ಹಿಂದೆ ಪ್ರಕರಣವನ್ನು ಪುನರ್ ವಿಚಾರಣೆಗೊಳಿಸಬೇಕು ಎಂದು ಮನವಿ ಮಾಡಿದ್ದರು. ಈ ಸಂಬಂಧ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಡಿ.ಡಬ್ಲ್ಯೂ ದೇಶಪಾಂಡೆ ಅವರು, ಪ್ರಕರಣವನ್ನು ಪುನರ್ ವಿಚಾರಣೆಗೊಳಪಡಿಸುವಂತೆ ಆದೇಶಿದ್ದಾರೆ. ಅಂತೆಯೇ ಪ್ರಕರಣದಲ್ಲಿರುವ ಸಾಕ್ಷ್ಯಗಳನ್ನು ಕೂಲಂಕುಷವಾಗಿ ಪರಿಶೀಲಿಸುವಂತೆ ಆದೇಶಿಸಿದ್ದು, ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.

ಅಲ್ಲದೆ ಇದೇ ಡಿಸೆಂಬರ್ 23ರಂದು ಸರ್ಕಾರಿ ಪರ ವಕೀಲರು ಮತ್ತು ಆರೋಪಿ ಪರ ವಕೀಲರು ತಮ್ಮ ತಮ್ಮ ಸಾಕ್ಷ್ಯಾಧಾರಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಆ ಮೂಲಕ ನಟ ಸಲ್ಮಾನ್ ಖಾನ್‌ಗೆ ನ್ಯಾಯಾಲಯ ತಾತ್ಕಾಲಿಕ ನೆಮ್ಮದಿ ನೀಡಿದೆ. ಪ್ರಕರಣ ಸಂಬಂಧ ಈ ಹಿಂದೆ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್  ನ್ಯಾಯಾಲಯ, ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಅಮಾಯಕ ನಾಗರಿಕರನ್ನು ಬಲಿತೆಗೆದುಕೊಂಡ ಪ್ರಕರಣವನ್ನು ಕೊಲೆ ಪ್ರಕರಣವೆಂದು ಪರಿಗಣಿಸಬೇಕು ಎಂದು ಸೂಚಿಸಿತ್ತು.

ಸಲ್ಮಾನ್ ಖಾನ್ ಪರ ವಕೀಲರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸೂಚನೆಯನ್ನು ನವೆಂಬರ್ 19ರಂದು ಮುಂಬೈ ಸೆಷನ್ಸ್ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅಲ್ಲದೆ ತಮ್ಮ ಕಕ್ಷೀದಾರರ ಪ್ರಕರಣವನ್ನು 'ಅಜಾಗರೂಕತೆಯಿಂದ ಮರಣ' ಪ್ರಕರಣದ ಅಡಿ ಮತ್ತೆ ವಿಚಾರಣೆ ನಡೆಸುವಂತೆ ಕೋರಿದ್ದರು.

2002 ಸೆಪ್ಟೆಂಬರ್ 22ರ ರಾತ್ರಿ ಮುಂಬೈನ ಬಾಂದ್ರಾದಲ್ಲಿ ಏರ್ಪಾಟಾಗಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟ ಸಲ್ಮಾನ್ ಖಾನ್ ಅವರು ಕಂಠಪೂರ್ತಿ ಕುಡಿದು, ತಮ್ಮ ಟೊಯೋಟಾ ಲೆಕ್ಸಸ್ ವಾಹನವನ್ನು ಫುಟ್‌ಪಾತ್ ಮೇಲೆ ಚಲಾಯಿಸಿದ್ದರು. ಈ ವೇಳೆ ಅಲ್ಲಿ ಪಾದಾಚಾರಿಗಳ ಮೇಲೆ ಕಾರು ಹರಿದು ಓರ್ವ ಸಾವನ್ನಪ್ಪಿ, ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

ಪ್ರಕರಣ ಸಂಬಂಧ ನಟ ಸಲ್ಮಾನ್ ಖಾನ್‌ರನ್ನು ಐಪಿಸಿ ಸೆಕ್ಷನ್ 304 (2) (ಅಜಾಗರೂಕತೆಯಿಂದ ಸಾವು), 279 (ನಿರ್ಲಕ್ಷ್ಯದಿಂದ ಸಾವು), 337 (ಘಾಸಿಗೊಳಿಸುವುದು), 338 (ಗಂಭೀರವಾಗಿ ಘಾಸಿಗೊಳಿಸುವುದು), 427 (ಕಿಡಿಗೇಡಿ ತನದಿಂದ ಆಸ್ತಿ ನಷ್ಟಮಾಡುವುದು) ಸೇರಿದಂತೆ ಭಾರತೀಯ ಮೋಟಾರ್ ವಾಹನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement