ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ತೆಲಂಗಾಣಕ್ಕೆ ವಿರೋಧ: 2ನೇ ದಿನವೂ ಸೀಮಾಂಧ್ರ ಬಂದ್

ತೆಲಂಗಾಣ ರಾಜ್ಯ ರಚನೆ ವಿರೋಧಿ ಪ್ರತಿಭಟನೆ ಮುಂದುವರೆದಿದ್ದು ಶುಕ್ರವಾರ ಆರಂಭಗೊಂಡಿದ್ದ ಸೀಮಾಂಧ್ರ ಬಂದ್ ಸತತ 2ನೇ ದಿನವೂ ಮುಂದುವರೆದಿದೆ.

Srinivasa Murthy VN
Updated On : 7 Dec 2013, 5:57 am

ಅನಂತಪುರ: ತೆಲಂಗಾಣ ರಾಜ್ಯ ರಚನೆ ವಿರೋಧಿ ಪ್ರತಿಭಟನೆ ಮುಂದುವರೆದಿದ್ದು ಶುಕ್ರವಾರ ಆರಂಭಗೊಂಡಿದ್ದ ಸೀಮಾಂಧ್ರ ಬಂದ್ ಸತತ 2ನೇ ದಿನವೂ ಮುಂದುವರೆದಿದೆ.

ರಾಯಲ ಸೀಮಾ ಮತ್ತು ಸೀಮಾಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ಬಂದ್‌ನಿಂದಾಗಿ ಈ ಭಾಗದ ಪ್ರಮುಖ ಪಟ್ಟಣಗಳು ಸ್ಥಗಿತಗೊಂಡಿದ್ದು, ಜನ ಜೀವನ ಅಸ್ಥವ್ಯಸ್ಥಗೊಂಡಿದೆ. ತೆಲಂಗಾಣ ರಾಜ್ಯ ರಚನೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ. ಅನಂತಪುರ, ಕರ್ನೂಲು, ಕಡಪ ಮತ್ತು ಕರಾವಳಿ ಆಂಧ್ರ ಭಾಗದ ಜಿಲ್ಲೆಗಳಾದ ವಿಶಾಖಪಟ್ಟಣಂ ಮತ್ತು ಪಶ್ಚಿಮ ಗೋದಾವರಿ ಸೇರಿದಂತೆ ಬಹುತೇಕ ಸೀಮಾಂಧ್ರ ಭಾಗದ ಜಿಲ್ಲೆಗಳಲ್ಲಿ ಬಂದ್ ಯಶ ಕಂಡಿದೆ.

ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸುತ್ತಿದ್ದಂತೆಯೇ ಕೇಂದ್ರ ಪ್ರವಾಸೋಧ್ಯಮ ಸಚಿವ ಚಿರಂಜೀವಿ ಅವರು ಕಳೆದ ಅಕ್ಟೋಬರ್ 4ರಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜಿನಾಮೆಯನ್ನು ಅಂಗೀಕರಿಸಿರಲಿಲ್ಲ.

ಆದರೆ ಶುಕ್ರವಾರ ಮಸೂದೆಗೆ ಕೇಂದ್ರದ ಸಚಿವ ಸಂಪುಟ ಒಪ್ಪಿಗೆ ನೀಡುತ್ತಿದ್ದಂತೆಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರವೊಂದನ್ನು ಬರೆದಿರುವ ಚಿರಂಜೀವಿ ಅವರು, ಕೇಂದ್ರದ ನಿರ್ಧಾರದ ವಿರುದ್ಧ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಅಲ್ಲದೆ ಈ ಕೂಡಲೇ ತಮ್ಮ ರಾಜಿನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಆ ಮೂಲಕ ನಟ ಚಿರಂಜೀವಿ ಅವರು ತೆಲಂಗಾಣ ವಿರೋಧಿ ಹೋರಾಟಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಭಯ ಭಾಗದ ಜನರಿಗೆ ನ್ಯಾಯ ಒದಗಿಸುವ ನಿರ್ಧಾರ ಮಾಡಬಹುದು ಎಂದು ಕಾದಿದ್ದೆ. ಆದರೆ ಈವರೆಗೂ ಅದು ಸಾಧ್ಯವಾಗಲೇ ಇಲ್ಲ. ಇದೇ ಕಾರಣಕ್ಕಾಗಿ ನನಗೆ ತುಂಬಾ ನೋವಾಗುತ್ತಿದ್ದು, ನೋವಿನಿಂದಲೇ ನನ್ನ ಸ್ಥಾನವನ್ನು ತ್ಯಜಿಸಿದ್ದೇನೆ ಎಂದು ಹೇಳಿದರು.

'ಕೈ' ಕೊಡಲು ಸಿದ್ಧರಾದ ಕಿರಣ್ ಕುಮಾರ್ ರೆಡ್ಡಿ

ಇದೇ ತೆಲಂಗಾಣ ರಾಜ್ಯ ರಚನೆ ಕುರಿತಂತೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದಾಗಿ ಅಸಂತುಷ್ಟರಾಗಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಕಾಂಗ್ರೆಸ್ ತೊರೆಯಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವ ಕಿರಣ್ ಕುಮಾರ್ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪಿಸುತ್ತಾರೆಂದು ಹೇಳಲಾಗುತ್ತಿತ್ತು.

ಆದರೆ ಇದೀಗ ಬರುತ್ತಿರುವ ವರ್ತಮಾನಗಳ ಪ್ರಕಾರ ಕಿರಣ್ ಕುಮಾರ್ ರೆಡ್ಡಿ ಅವರು ಕಾಂಗ್ರೆಸ್ ತೊರೆದು ತೆಲುಗುದೇಶಂ (ಟಿಡಿಪಿ)ಪಕ್ಷ ಅಥವಾ ಜಗನ್ ಮೋಹನ್ ರೆಡ್ಡಿ ಅವರು ವೈಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ತೆಲಂಗಾಣದಿಂದಾಗಿ ಆಂಧ್ರ ಪ್ರದೇಶದ ರಾಜಕೀಯ ವಲಯ ಕುದಿಯುತ್ತಿದ್ದು, ಸಧ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement