ವೇಗವಾಗಿ ಸಂಬಂಧ ಸುಧಾರಣೆ ಸಾಧ್ಯವಿಲ್ಲ: ಇಮ್ರಾನ್ ಖಾನ್
ವೇಗವಾಗಿ ಭಾರತದೊಂದಿಗೆ ಸಂಬಂಧ ಸುಧಾರಿಸಲು ಪ್ರಧಾನಿ ನವಾಜ್ ಷರೀಫ್ರಿಂದ ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹೇಳಿದ್ದಾರೆ.
ಇಸ್ಲಾಮಾಬಾದ್: ವೇಗವಾಗಿ ಭಾರತದೊಂದಿಗೆ ಸಂಬಂಧ ಸುಧಾರಿಸಲು ಪ್ರಧಾನಿ ನವಾಜ್ ಷರೀಫ್ರಿಂದ ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹೇಳಿದ್ದಾರೆ.
ಇಸ್ಲಾಮಾಬಾದ್ನಲ್ಲಿ ಮಾತನಾಡಿದ ಇಮ್ರಾನ್ ಖಾನ್ ಅವರು, ಭಾರತದೊಂದಿಗಿನ ಸಂಬಂಧವನ್ನು ವೇಗವಾಗಿ ಸುಧಾರಿಸಲು ಪ್ರಧಾನಿ ನವಜಾ ಶರೀಫ್ ಅವರಿಂದ ಸಾಧ್ಯವಿಲ್ಲ. ಪಾಕಿಸ್ತಾನದಲ್ಲಿ ನೆಲೆಯೂರಿರುವ ಮೂಲಭೂತ ವಾದಿಗಳ ಒತ್ತಡದಿಂದಾಗಿ ಅದು ಸಾಧ್ಯವಾಗುವುದಿಲ್ಲ. ಭವಿಷ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳು ಯೂರೋಪಿಯನ್ ಒಕ್ಕೂಟದಂತಿರುತ್ತದೆ. ಉಭಯ ದೇಶಗಳ ನಾಗರೀಕರು ಸ್ವತಂತ್ರವಾಗಿ ವ್ಯವಹರಿಸುವಂತಾಗುತ್ತದೆ ಎಂದು ಹೇಳಿದರು.
ಅಲ್ಲದೆ ಶೀಘ್ರದಲ್ಲಿಯೇ ತಮ್ಮ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದ್ದು, ನಾವು ಅಧಿಕಾರಕ್ಕೆ ಬಂದರೆ ದೆಹಲಿಯಿಂದ ಲಾಹೋರ್ವರೆಗೂ ಜನರು ಯಾವುದೇ ಅಡೆತಡೆ ಇಲ್ಲದಂತೆ ಸಂಚರಿಸುವಂತೆ ಮಾಡುತ್ತೇನೆ. ನಾನು ಕಂಡಂತೆ ಪ್ರಸ್ತುತ ಪಾಕಿಸ್ತಾನದಲ್ಲಿ ಮತಾಂಧತೆಯು ಉತ್ತುಂಗದ ಸ್ಥಿತಿಯಲ್ಲಿದ್ದು, ಮುಂದಿನ 6 ತಿಂಗಳಲ್ಲಿ ಆಫ್ಘಾನಿಸ್ತಾನದಿಂದ ಅಮೆರಿಕದ ಪಡೆಗಳು ವಾಪಸಾಗಲಿವೆ. ಅನಂತರ ಪಾಕಿಸ್ತಾನದಲ್ಲಿ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆ ಇದೆ.
ಒಮ್ಮೆ ಇದು ಸಾಧ್ಯವಾದರೆ ಭಾರತದೊಂದಿಗೆ ಸಂಬಂಧ ಸುಧಾರಣೆಯತ್ತ ನಾವು ಗಮನ ಕೇಂದ್ರೀಕರಿಸ ಬಹುದು ಎಂದು ಇಮ್ರಾನ್ ಖಾನ್ ಹೇಳಿದರು.